ADVERTISEMENT

ಸರ್ಕಾರಕ್ಕೆ ಧಮ್‌ ಇದ್ದರೆ ಸಂಘಟನೆಗಳನ್ನು ನಿಷೇಧಿಸಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 3:07 IST
Last Updated 23 ಏಪ್ರಿಲ್ 2022, 3:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ: ಗಲಭೆ ಹಿಂದೆ ಸಂಘಟನೆಗಳ ಕೈವಾಡವಿದ್ದರೆ ಅವುಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಲಿ, ಬೇಡ ಎಂದವರು ಯಾರು? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾದಾಮಿಗೆ ತೆರಳುವ ಮುನ್ನ ಶುಕ್ರವಾರ ಇಲ್ಲಿನ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ಸರ್ಕಾರಕ್ಕೆ ಧಮ್‌ ಇದ್ದರೆ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧಿಸಬೇಕು. ಎಸ್‌ಡಿಪಿಐ, ಆರ್‌ಎಸ್‌ಎಸ್, ಬಜರಂಗಳ, ಎಐಎಂಐಎಂಗಳನ್ನು ನಿಷೇಧ ಮಾಡಿ‘ ಎಂದರು.

ರಾಜೀನಾಮೆ ಕೊಡಲಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹಸಚಿವ ಆರಗ ಜ್ಞಾನೇಂದ್ರ ಮೇಲಿಂದ ಮೇಲೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದು ಗೃಹ ಇಲಾಖೆಯ ಕೆಲಸ. ಆದರೆ, ಆ ಇಲಾಖೆ ಸಚಿವರೇ ಸಮಾಜದ ಶಾಂತಿ ಭಂಗ ಮಾಡುತ್ತಿದ್ದಾರೆ. ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಒತ್ತಾಯಿಸಿದರು.

ADVERTISEMENT

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ’ಯಾರೊ ಒಬ್ಬರು ತಪ್ಪು ಮಾಡಿದ್ದಾರೆ ಎಂದಾಕ್ಷಣ ಎಲ್ಲರನ್ನೂ ಒಂದೇ ರೀತಿ ನೋಡುವುದು ಸರಿಯಲ್ಲ. ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು. ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಡಿ‘ ಎಂದರು.

ಕರ್ನಾಟಕದಲ್ಲಿಯೂ ಸರ್ಕಾರ ರಚಿಸುವ ಕುರಿತು ಅರವಿಂದ ಕೇಜ್ರಿವಾಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ ’ಆಮ್‌ ಆದ್ಮಿ ಕೂಡ ರಾಜಕೀಯ ಪಕ್ಷ. ಯಾರಿಗೆ ಅಧಿಕಾರ ಕೊಡಬೇಕು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ‘. ಪ್ರಶಾಂತ ಕಿಶೋರ ಕಾಂಗ್ರೆಸ್‌ಗೆ ಬರುತ್ತಿರುವ ವಿಷಯ ನನಗೆ ಗೊತ್ತಿಲ್ಲ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮ ಕುರಿತು ’ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿಯ ದಿವ್ಯಾ ಹಾಗರಗಿಯನ್ನು ಕೂಡಲೇ ಬಂಧಿಸಬೇಕು. ಕೆಲವರಿಗೆ ಬಹಳಷ್ಟು ಅನ್ಯಾಯವಾಗಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.