ADVERTISEMENT

ದೇಶದ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆಯನ್ನೂ ನೀಡಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 9:16 IST
Last Updated 22 ಅಕ್ಟೋಬರ್ 2021, 9:16 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ದೇಶದಲ್ಲಿ ಇದುವರೆಗೆ ಕೇವಲ29 ಕೋಟಿ ಜನರಿಗೆ ಮಾತ್ರವೇ ಎರಡು ಡೋಸ್‌ ಲಸಿಕೆ ನೀಡಲಾಗಿದೆ.68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆಯನ್ನೂ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರವು 100 ಕೋಟಿ ಡೋಸ್ ಲಸಿಕೆ‌ವಿತರಣೆಯ ಸಂಭ್ರಮಾಚರಣೆಯಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ʼದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವನರೇಂದ್ರ ಮೋದಿಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆʼ ಎಂದು ಕಿಡಿಕಾರಿದ್ದಾರೆ.

ʼದೇಶದಲ್ಲಿ ಇಲ್ಲಿಯವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ.139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ?ʼ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮುಂದುವರಿದು, ʼಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ.ಕೊಟ್ಟಿರುವುದು 100 ಕೋಟಿ ಮಾತ್ರ.ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲʼ ಎಂದು ಚಾಟಿ ಬೀಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ,ʼಅಮೆರಿಕ ಶೇ 56, ಚೀನಾ ಶೇ 70 ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ.ಭಾರತದಲ್ಲಿ ಕೇವಲ ಶೇ 21 ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ.ಯಾವ ಸಾಧನೆಗೆ ಸಂಭ್ರಮ?'ವೈಫಲ್ಯದ ವಿಶ್ವಗುರು' ಕುಖ್ಯಾತಿಗಾಗಿಯೇ?ʼ ಎಂದು ವ್ಯಂಗ್ಯವಾಡಿದ್ದಾರೆ.

ʼಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿ ಅವರೇ?ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ.ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣʼ ಎಂದು ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.