ADVERTISEMENT

ಕುಮಾರಸ್ವಾಮಿಯ ಅಪ್ಪ, ಅಣ್ಣ, ಮಗ ಸೋತಿಲ್ಲವೇ: ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 11:03 IST
Last Updated 22 ಜನವರಿ 2022, 11:03 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಚುನಾವಣೆಯಲ್ಲಿ ಸೋಲು ಗೆಲುವು ನಿರ್ಧರಿಸುವುದು ಮತದಾರ. ಮತದಾರ ಕೊಟ್ಟ ತೀರ್ಪನ್ನು ನಾವು ಸ್ವೀಕರಿಸಬೇಕು. ನಾನು ಸೋತಿದ್ದೇನೆ. ಕುಮಾರಸ್ವಾಮಿ ಅವರ ಅಪ್ಪ ದೇವೇಗೌಡರು, ಅಣ್ಣ ರೇವಣ್ಣ ಸೋತಿಲ್ಲವೇ, ಮಗ ಸೋತಿಲ್ಲವೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಚಾಮುಂಡೇಶ್ವರಿಯಿಂದ ಓಡಿಸಿದ್ದಾಗಿದೆ. ಬಾದಾಮಿಯಿಂದ ಓಡಿಸುವುದು ಬಾಕಿ ಇದೆ’ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಸರಣಿ ಟ್ವೀಟ್‌ಗೆ, ‘ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ‘ ಎಂದು ಹೇಳುತ್ತಲೇ ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪು ಅಂತಿಮ.‌ ನಾನು ರಾಜ್ಯ ಘಟಕದ ಅಧ್ಯಕ್ಷ ಆಗಿದ್ದಾಗ ಈ ಕುಮಾರಸ್ವಾಮಿ ಎಲ್ಲಿದ್ದರು ಎಂದೇ ಗೊತ್ತಿಲ್ಲ.‌ ನಾನೇಕೆ ಅವರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲಲಿ. ಕಣ್ಣೀರು ಹಾಕಲಿ’ ಎಂದೂ ಪ್ರಶ್ನಿಸಿದರು.

ADVERTISEMENT

‘ಈಗ ರಾಜ್ಯದ ಜನರ ಮುಂದೆ ಕಣ್ಣಿರು ಹಾಕ್ತಿರುವುದು ಯಾರೆಂದು ಗೊತ್ತಿದೆ. ನಾನೇಕೆ ಕಣ್ಣಿರು ಹಾಕಲಿ. ಅವರ ಭಾಷೆ ಅವರ ರಾಜಕೀಯ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದೂ ಹೇಳಿದರು.

ದರ ಏರಿಕೆ ಬೇಡ: ‘ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಸಚಿವರು ಹೇಳಿದ್ದಾರೆ.‌ ಯಾವುದೇ ಕಾರಣಕ್ಕೂ ವಿದ್ಯುತ್ ದರ, ಕುಡಿಯುವ ನೀರಿನ ದರ ಏರಿಕೆ ಮಾಡಬಾರದು‘ ಎಂದು ಸಿದ್ದರಾಮಯ್ಯ ಹೇಳಿದರು.

‘ವಾರಾಂತ್ಯ ಕರ್ಫ್ಯೂ ಶುಕ್ರವಾರ ವಾಪಸು ಪಡೆದಿದ್ದಾರೆ.‌ ಈಗ ತೆರಿಗೆ ಹೆಚ್ಚಿಸುವುದು ಸರಿಯಲ್ಲ. ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ. ಜನಸಾಮಾನ್ಯರ ಮೇಲೆ ತೆರಿಗೆ ಹಾಕಬೇಡಿ. ಕೊರೊನಾದಿಂದ ಈಗಾಗಲೇ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಸಣ್ಣಪುಟ್ಟ ಆದಾಯ ಇರುವವರಿಗೆ ತುಂಬಾ ಕಷ್ಟವಾಗಿದೆ’ ಎಂದರು.

‘ತಮಿಳುನಾಡಿನ‌ ಹೊಗೇನಕಲ್ ಯೋಜನೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ತಮಿಳುನಾಡು ಯೋಜನಾ ವರದಿ ತಯಾರಿಸುತ್ತಿದೆ‌. ಈ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಬೇಕು. ಈ ಯೋಜನೆಯನ್ನು ಕೇಂದ್ರ ಒಪ್ಪಬಾರದು’ ಎಂದರು.

‘ಮೇಕೆದಾಟು ವಿಚಾರವಾಗಿ ಇನ್ನೂ ಏಳು ದಿನ ಪಾದಯಾತ್ರೆ ಬಾಕಿ ಇದೆ. ಮೇಕೆದಾಟು ವಿಚಾರವಾಗಿ ಸುಪ್ರಿಂ ಕೋರ್ಟ್‌ನಲ್ಲಿ ಯಾವುದೇ ಅಡ್ಡಿ ಇಲ್ಲ. ಈಗಾಗಲೇ ನ್ಯಾಯಮಂಡಳಿ ತೀರ್ಪು ನೀಡಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.