ADVERTISEMENT

ದೆಹಲಿಗೆ ಕಾಂಗ್ರೆಸ್ ನಾಯಕರ ದಂಡು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 1:38 IST
Last Updated 12 ಡಿಸೆಂಬರ್ 2019, 1:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಭಾರತ್ ಬಚಾವೊ’ ಆಂದೋಲನದಲ್ಲಿ ಭಾಗವಹಿಸಲು ಕಾಂಗ್ರೆಸ್ ಹಿರಿಯ ನಾಯಕರು ಗುರುವಾರ ದೆಹಲಿಯತ್ತ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರನ್ನು ಭೇಟಿಮಾಡಿ ರಾಜ್ಯದ ಇಬ್ಬರು ನಾಯಕರು ನೀಡಿರುವ ರಾಜೀನಾಮೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು, ಇನ್ನೂ ಅವರ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಕೊಂಡಿಲ್ಲ.‌

ಪಕ್ಷದ ಹಿರಿಯ ಮುಖಂಡರು ಇದೇ ಸಂದರ್ಭವನ್ನು ಬಳಸಿಕೊಂಡು ತಕ್ಷಣವೇ ರಾಜೀನಾಮೆ ಅಂಗೀಕರಿಸಿ, ಹೊಸಬರಿಗೆ ಅವಕಾಶ ನೀಡುವಂತೆ ಒತ್ತಾಯಿಸಲಿದ್ದಾರೆ. ಭಾರತ್ ಬಚಾವೊ ಆಂದೋಲನದ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ರಾಜ್ಯದಲ್ಲಿನ ಪಕ್ಷದ ಪರಿಸ್ಥಿತಿಯನ್ನು ವಿವರಿಸಲು ಹಿರಿಯ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆಂದೋಲನದ ಸಮಯದಲ್ಲೇ ಸಿಗುವ ಅವಕಾಶ ಬಳಸಿಕೊಂಡು ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಪೌರತ್ವ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್‌, ಭಾರತ್ ಬಚಾವೊ ಆಂದೋಲನವನ್ನು ಸಂಘಟಿಸಿದೆ. ಈ ಎಲ್ಲ ಗದ್ದಲಗಳು ಮುಗಿದ ನಂತರ ರಾಜ್ಯದ ಸಮಸ್ಯೆಗಳ ಕಡೆಗೆ ಗಮನಕೊಡಲಿದ್ದಾರೆ. ಆ ನಂತರವಷ್ಟೇ ರಾಜೀನಾಮೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಇಬ್ಬರು ನಾಯಕರು ನೀಡಿರುವ ರಾಜೀನಾಮೆಯನ್ನು ಪಕ್ಷದ ವರಿಷ್ಠರು ತಕ್ಷಣಕ್ಕೆ ಅಂಗೀಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಲಾಬಿ ಆರಂಭ: ದಿನೇಶ್ ನೀಡಿರುವ ರಾಜೀನಾಮೆ ಅಂಗೀಕಾರಕ್ಕೂ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು, ಅಧಿಕಾರ ಗಿಟ್ಟಿಸಿಕೊಳ್ಳಲು ಲಾಬಿ ಆರಂಭಿಸಿದ್ದಾರೆ. ತಮ್ಮ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೃಷ್ಣ ಬೈರೇಗೌಡ ಅವರ ಹೆಸರುಗಳು ಕೇಳಿಬಂದಿವೆ. ಮಲ್ಲಿಕಾರ್ಜುನ ಖರ್ಗೆ ಹೆಸರೂ ಚಾಲ್ತಿಗೆ ಬಂದಿದೆ.

ಮುನಿಯಪ್ಪ– ದೇವೇಗೌಡ ಭೇಟಿ:ಕೆ.ಎಚ್.ಮುನಿಯಪ್ಪ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿದ್ದರು.

ದೇವೇಗೌಡ ಮಾತಿಗೆ ಸೋನಿಯಾ ಗಾಂಧಿ ಬಳಿ ಗೌರವವಿದೆ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸೋನಿಯಾ ಅವರಿಗೆ ತಮ್ಮ ಹೆಸರು ಸೂಚಿಸುವಂತೆ ಕೇಳಿಕೊಂಡರು ಎನ್ನಲಾಗಿದೆ. ಭೇಟಿ ನಂತರ ಸುದ್ದಿಗಾರರೊಂದಿಗೆ ಮುನಿಯಪ್ಪ ಮಾತನಾಡಿ, ‘ಆರೋಗ್ಯ ವಿಚಾರಿಸಲು ಬಂದಿದ್ದೆ. ಯಾವುದೇ ರಾಜಕೀಯ ಚರ್ಚಿಸಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.