ADVERTISEMENT

ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:44 IST
Last Updated 12 ಜುಲೈ 2025, 6:44 IST
   

ಹುಬ್ಬಳ್ಳಿ; 'ಮುಖ್ಯಮಂತ್ರಿ ಬದಲಾಯಿಸಬೇಕೋ, ಬೇಡವೋ ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಆ ಕುರಿತು ಅವರೇ ಮಾತನಾಡುತ್ತಿಲ್ಲ ಎಂದಾಗ, ನಾವು-ನೀವು ಚರ್ಚೆ ನಡೆಸುವುದರಲ್ಲಿ ಅರ್ಥವಿಲ್ಲ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಅವರು ಯಾರೊಂದಿಗೂ ಚರ್ಚಿಸಿಲ್ಲ. ಸಿಎಂ ಬದಲಾಯಿಸುವ ಅಧಿಕಾರ ಇರುವ ಪಕ್ಷದ ನಾಯಕರು ಸುಮ್ಮನಿದ್ದಾರೆ. ಹೀಗಾಗಿ ಆ ಕುರಿತು ಚರ್ಚಿಸುವುದು ಅಪ್ರಸ್ತುತ' ಎಂದರು.

'ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆ ನಡೆಸಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ‌ ಕಾರ್ಯೋನ್ಮುಖರಾಗಬೇಕು ಎಂದು ಶಾಸಕರಿಗೆ ಸೂಚಿಸಿದ್ದಾರೆ. ಕೆಪಿಸಿಸಿ ಅಧ್ಯಕರ ಬದಲಾವಣೆ ಕುರಿತು ಸಹ ಯಾವ ಚರ್ಚೆಗಳು ನಡೆದಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನವಾಗಿದೆ' ಎಂದು ಹೇಳಿದರು.

ADVERTISEMENT

'ನಾಯಕ ರಾಹುಲ್ ಗಾಂಧಿ ಅವರು ಬಿಹಾರ ಪ್ರವಾಸದಲ್ಲಿ ಇದ್ದ ಕಾರಣ, ಸಿಎಂ ಮತ್ತು ಡಿಸಿಎಂ ಅವರಿಗೆ ದೆಹಲಿಯಲ್ಲಿ ಭೇಟಿಯಾಗಲು ಸಾಧ್ಯವಾಗಿಲ್ಲ. ಈ ಕಾರಣದಿಂದ ರಾಜ್ಯ ನಾಯಕರು ವೀಕ್ ಆಗಿದ್ದಾರೆ ಎನ್ನಲು ಸಾಧ್ಯವಿಲ್ಲ' ಎಂದು ಸಚಿವ ಪ್ರಿಯಾಂಕ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.