ಕಾಂಗ್ರೆಸ್
ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಸಚಿವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಹೊಣೆ ನೀಡಲಾಗಿದೆ.
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು, ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲು ಹಾಗೂ ಎಲ್ಲ ಆಕಾಂಕ್ಷಿಗಳು ತಕ್ಷಣದಿಂದಲೇ ತಮ್ಮ ತಮ್ಮ ವಾರ್ಡ್, ಕ್ಷೇತ್ರಗಳಲ್ಲಿ ಸಕ್ರಿಯರಾಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಿದ ಶ್ರೇಯ ಕಾಂಗ್ರೆಸ್‌ಗೆ ಸಲ್ಲಬೇಕಾದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳನ್ನು ಗೆಲ್ಲಲೇಬೇಕು. ಎಲ್ಲ ಐದು ಪಾಲಿಕೆಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಸಚಿವರು ಪ್ರತಿ ಪಾಲಿಕೆಯನ್ನು ಹಂಚಿಕೆ ಮಾಡಿಕೊಂಡು ಸೂಕ್ತ ಕಾರ್ಯತಂತ್ರ ರೂಪಿಸಲು ಸೂಚಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಸಜ್ಜಾಗಬೇಕು. ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ, ಅವರ ಸಾಮಾಜಿಕ ಸೇವೆ, ಗೆಲ್ಲುವ ಸಾಮರ್ಥ್ಯವನ್ನು ಪರಿಶೀಲನೆ ಮಾಡಬೇಕು. ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಪಕ್ಷ ಅಧಿಕಾರ ಪಡೆಯಲು ಸಾಧ್ಯವಾಗಿದೆ. ಯೋಜನೆ ಜಾರಿಯ ನಂತರ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಿದೆ. ತಲಾ ಆದಾಯವೂ ಹೆಚ್ಚಾಗಿದೆ. ಜನರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ಹೊಣೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಎಲ್ಲ ಐವರು ಉಪಾಧ್ಯಕ್ಷರಿಗೆ ವಹಿಸಬೇಕು ಎಂದು ಸಲಹೆ ನೀಡಿರುವುದಾಗಿ ಪಕ್ಷದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.