ADVERTISEMENT

ವಿಧಾನಸಭೆ ವಿರೋಧ ಪಕ್ಷ ನಾಯಕನ ಆಯ್ಕೆ ಕಗ್ಗಂಟು: ಅಭಿಪ್ರಾಯ ಸಂಗ್ರಹಿಸಿದ ಮಿಸ್ತ್ರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 10:05 IST
Last Updated 6 ಅಕ್ಟೋಬರ್ 2019, 10:05 IST
ಮಧುಸೂದನ್ ಮಿಸ್ತ್ರಿ ಅವರಿಗೆ ಸ್ವಾಗತ ಕೋರುತ್ತಿರುವುದು
ಮಧುಸೂದನ್ ಮಿಸ್ತ್ರಿ ಅವರಿಗೆ ಸ್ವಾಗತ ಕೋರುತ್ತಿರುವುದು   

ಬೆಂಗಳೂರು:ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಭಾನುವಾರ ಒನ್ ಟು ಒನ್ ಸಭೆ ನಡೆಸಿ ಐವತ್ತಕ್ಕೂ ಹೆಚ್ಚು ಮುಖಂಡರಿಂದ ಅಭಿಪ್ರಾಯ ಸಂಗ್ರಹ ನಡೆಸಿದ್ದಾರೆ. ನಾಯಕರು ಒಬ್ಬೊಬ್ಬರಾಗಿಬಂದು ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿದರು.

ಶಾಸಕ ಎಂ.ಬಿ.ಪಾಟೀಲ, ಎಚ್.ಕೆ ಪಾಟೀಲ, ರಮಾನಾಥ್ ರೈ, ಕೃಷ್ಣಭೈರೇಗೌಡ, ಈಶ್ವರ್ ಖಂಡ್ರೆ, ಎಸ್.ಆರ್.ಪಾಟೀಲ, ಐವಾನ್ ಡಿಸೋಜಾ, ಬೈರತಿ ಸುರೇಶ್, ಜಮಿರ್ ಅಹ್ಮದ್, ಕೆ.ಬಿ ಕೋಳಿವಾಡ, ಅಶೋಕ್ ಪಟ್ಟಣ್, ರಿಜ್ವಾನ್ ಅರ್ಷದ್, ಹರಿಹರ ರಾಮಪ್ಪ, ಕಂಪ್ಲಿ‌ ಗಣೇಶ್ ಸೇರಿದಂತೆ ಹಲವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಮೊದಲೇ ಪ್ರಶ್ನಾವಳಿಗಳನ್ನು ಸಿದ್ದಪಡಿಸಿಕೊಂಡಿದ್ದ ಮಧು‌ಸೂದನ್ ಮಿಸ್ತ್ರಿ, ಹಲವು ಪ್ರಶ್ನೆಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ.

ವಿಧಾಸಭೆ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ, ಉಪನಾಯಕ, ಮುಖ್ಯ ಸಚೇತಕ ಸ್ಥಾನಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಒನ್ ಟು ಒನ್ ಚರ್ಚೆ ನಡೆಸಿದ್ದಾರೆ.
ಈ ಚರ್ಚೆಯಲ್ಲಿ ಸಿದ್ದರಾಮಯ್ಯ ಬಗ್ಗೆಯೇ ಬಹುತೇಕ ಶಾಸಕರು, ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ

ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕ ಸ್ಥಾನ ನೀಡದಂತೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ನಾಯಕರಿಂದ ವಿರೋಧ ವ್ಯಕ್ತಪಡಿಸಿದ್ದಾರೆ.ಬಿ.ಕೆ ಹರಿಪ್ರಸಾದ್, ಕೆ.ಎಚ್ ಮುನಿಯಪ್ಪವಿರೋಧ ವ್ಯಕ್ತಪಡಿಸಿದ್ದು ಇವರಿಬ್ಬರುಒಟ್ಟಿಗೆ ತೆರಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು. ವಿರೋಧ ಪಕ್ಷ ಸ್ಥಾನವನ್ನ ಸಿದ್ದರಾಮಯ್ಯ ಬದಲಿಗೆ ಬೇರೆಯವರಿಗೆ ಕೊಡಿ. ಈಗಲೇ ಸಿದ್ದರಾಮಯ್ಯಗೆ ಕಡಿವಾಣ ಹಾಕಿ. ಇಲ್ಲದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತೆ ಎಂದು ಇವರು ಹೇಳಿದ್ದಾರೆ.
ಕೆ.ಬಿ ಕೋಳಿವಾಡ ಕೂಡ ಸಿದ್ದರಾಮಯ್ಯಗೆ ವಿರೋಧ ಪಕ್ಷ ಸ್ಥಾನ ನೀಡದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಪ್ರಾಯವನ್ನ ಹೈಕಮಾಂಡ್ ಗೆ ತಲುಪಿಸುತ್ತೇನೆ ಎಂದು ಮಿಸ್ತ್ರಿ ಭರವಸೆ ನೀಡಿದ್ದಾರೆ

ಮಧುಸೂದನ್ ಮಿಸ್ತ್ರಿ ಮುಂದೆ ತಮ್ಮ ಅಭಿಪ್ರಾಯ ಹೇಳಲು ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಬಂದಿದ್ದರು. ಆದರೆ, ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ, ನೀವು ಯಾಕೆ ಇಲ್ಲಿಗೆ ಬಂದಿರಿ ಎಂದು ಮಿಸ್ತ್ರಿ ನೇರಾವಾಗಿಯೇ ಕೇಳಿದ್ದಾರೆ.

ನಿಮ್ಮ ಹೆಸರಿಲ್ಲ ಹೊರಗೆ ಹೋಗಿ ಎಂದು ಮಿಸ್ತ್ರಿ ಹೇಳಿದಾಗ ಪಟ್ಟಿಯನ್ನು ಎಸೆದು ಹೊರ ಬಂದಿದ್ದಾರೆ ಪರಮೇಶ್ವರ್ ನಾಯಕ್.

ಪರಮೇಶ್ವರ್ ನಾಯಕ್ ಹೊರಹೋಗುತ್ತಿದ್ದಂತೆ, ಶಾಸಕ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಬಣದ ಶಾಸಕರು ಸಹಿ ಸಂಗ್ರಹಿಸಿದ್ದಾರೆ.

ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ

ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ

ಕಾಂಗ್ರೆಸ್ ಪಕ್ಷ ಉಳಿಸುವಂತೆ ರಾಜ್ಯಸಭಾ ಮಾಜಿ ಸದಸ್ಯ, ಚಿತ್ರದುರ್ಗದ ಮುಖಂಡ ಎಚ್.ಹನುಮಂತಪ್ಪ ಅವರಿಂದ ಕೆಪಿಸಿಸಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ನವರಿಗೆ ಕಾಂಗ್ರೆಸ್ ಉಳಿಸುವ ಬುದ್ಧಿ ಕೊಡು ಭಗವಂತ ಎಂಬ ಬ್ಯಾನರ್ ಹಾಕಿಕೊಂಡು ಮೌನ ಪ್ರತಿಭಟನೆ ನಡೆಸಿದ ಅವರು ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

ಸಬ್ ಕೋ ಸನ್ಮತಿ ದೇ ಭಗವಾನ್ ಎಂಬ ಗಾಂಧೀಜಿಯವರ ಹೇಳಿಕೆ ಮೂಲಕ ಮೌನ ಪ್ರತಿಭಟನೆ ನಡೆಸಿದ್ದಾರೆ ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.