ADVERTISEMENT

ಕಾಂಗ್ರೆಸ್‌ನಿಂದ ಮುಸ್ಲಿಮರನ್ನು ದಿಕ್ಕು ತಪ್ಪಿಸುವ ಕೆಲಸ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ ಬೈರಿದೇವರಕೊಪ್ಪ‌ ದರ್ಗಾ ತೆರವು ವಿಚಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 8:38 IST
Last Updated 25 ಡಿಸೆಂಬರ್ 2022, 8:38 IST
   

ಹುಬ್ಬಳ್ಳಿ: 'ಬೈರಿದೇವರಕೊಪ್ಪದ ದರ್ಗಾ ತೆರವಿಗೆ ಸಂಬಂಧಿಸಿ ಎದುರುಗಡೆ ಯಾರು ವಿರೋಧಿಸಿದ್ದರೋ ಅವರೇ, ಹಿಂಬದಿಯಿಂದ ತೆರವಿಗೆ ಸಹಕಾರ ನೀಡಿದ್ದರು' ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ದರ್ಗಾ ತೆರವು ವಿಷಯದಲ್ಲಿ ಕೆಲವರು ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ನೀವು ದರ್ಗಾ ತೆರವು ಮಾಡಿ, ನಾವು ಅಧಿವೇಶನದಲ್ಲಿ ವಿರೋಧಿಸುತ್ತೇವೆ ಎಂದು ಅವರೇ ಹೇಳಿದ್ದರು. ಇಂತಹ ಗೊಂದಲದ ವಾತಾವರಣ ಯಾಕೆ ನಿರ್ಮಿಸಬೇಕು? ಹಿಂದಿನಿಂದಲೂ ಅವರು ತುಷ್ಟೀಕರಣ ರಾಜಕಾರಣ ಮಾಡುತ್ತ, ಮುಸ್ಲಿಮರನ್ನು ದಿಕ್ಕು ತಪ್ಪಿಸುತ್ತಲೇ ಬಂದಿದ್ದಾರೆ' ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.

'ವಿಧಾನದ ಸೌಧದಲ್ಲಿ ಜಿಗಿದು ಭಾಷಣ ಮಾಡಿರುವ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲೇ ಬಿ.ಆರ್.ಟಿ.ಎಸ್. ಯೋಜನೆಯ ವಿನ್ಯಾಸವಾಗಿತ್ತು. ಧಾರ್ಮಿಕ ಕಟ್ಟಡಗಳನ್ನು ಉಳಿಸಿಕೊಳ್ಳಬಹುದಾಗಿದ್ದರೆ ಆಗಲೇ ಪರ್ಯಾಯ ವಿನ್ಯಾಸ ಮಾಡಬಹುದಿತ್ತು. ಆ ಮಾರ್ಗದಲ್ಲಿ 13 ದೇವಸ್ಥಾನ, ಒಂದು ಚರ್ಚ್ ತೆರವು ಮಾಡಲಾಗಿದೆ. ಆ ಸಂದರ್ಭ ಅವರಿಗೆ ಏನೂ ಅನಿಸಲಿಲ್ಲವೇ? ಈಗ ಹೇಗೆ ಒಮ್ಮೆಲೆ ನೋವಾಯಿತು' ಎಂದು ಪ್ರಶ್ನಿಸಿದರು.

ADVERTISEMENT

'ದೇವಸ್ಥಾನಗಳ ತೆರವು ವಿಷಯ ಬಂದಾಗ ಹಿಂದೂಗಳಿಗೆ ನಾವು ಮನವರಿಕೆ ಮಾಡಿದ್ದೆವು. ಸಂಬಂಧಪಟ್ಟವರು ದರ್ಗಾ ತೆರವು ವಿಚಾರದಲ್ಲಿ ಹಾಗೆ ಮಾಡಬೇಕಿತ್ತು. ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಸಹಕರಿಸಬೇಕು. ನಾವುಸೌಹಾರ್ದತೆಯಿಂದ ಬದುಕಬೇಕೆಂದು ಬಯಸುತ್ತೇವೆ. ದೇವಸ್ಥಾನ, ದರ್ಗಾ, ಚರ್ಚ್ ಎಲ್ಲವೂ ನಮಗೆ ಪವಿತ್ರವೇ. ಅಭಿವೃದ್ಧಿಗೆ ಅನಿವಾರ್ಯವಿದ್ದಾಗ ತೆರವು ಮಾಡಲೇಬೇಕಾಗುತ್ತದೆ' ಎಂದು ಹೇಳಿದರು.

'ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ‌ ಓಡಾಡಿದಲ್ಲೆಲ್ಲ ಕಾಂಗ್ರೆಸ್ ಸೋತು, ಬಿಜೆಪಿಗೆ‌ ಲಾಭವಾಗಿದೆ. ದಯಮಾಡಿ ಅವರು ಮತ್ತಷ್ಟು ಓಡಾಡಲಿ. ಆದರೆ, ದೇಶದ ಹಿತದೃಷ್ಟಿಯಿಂದ‌ ಅವರು ಕೋವಿಡ್ ನಿಯಮ ಪಾಲಿಸಲಿ. ಎಲ್ಲಿಯೂ ಅವರ ಯಾತ್ರೆಗೆ ನಾವು ತಡೆಯೊಡ್ಡಿಲ್ಲ' ಎಂದು‌ ಮಾಧ್ಯಮದವರ ಪ್ರಶ್ನೆಗೆ‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.