ADVERTISEMENT

ಬಿಜೆಪಿ ಶಾಸಕರಿಗೆ ‘ಕೋಟಿ’ ನೆರವು: ಕಾಂಗ್ರೆಸ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:18 IST
Last Updated 18 ಸೆಪ್ಟೆಂಬರ್ 2019, 20:18 IST
ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಬಳಿಯಿರುವ ಗಾಂಧೀಜಿ ಪ್ರತಿಮೆಯ ಮುಂದೆ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸಿದರು
ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿಧಾನಸೌಧದ ಬಳಿಯಿರುವ ಗಾಂಧೀಜಿ ಪ್ರತಿಮೆಯ ಮುಂದೆ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ನೆರೆಗೆ ತುತ್ತಾದ ಪ್ರದೇಶಗಳಿಗೆ ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಹಾಗೂ ಅನರ್ಹ ಶಾಸಕರ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಬಿಡಿಗಾಸೂ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ನೀಡದಿರುವ ವಿಚಾರ ಪ್ರಸ್ತಾಪಿಸಿದರು. ಇದೇ ರೀತಿ ಸುಮ್ಮನಿದ್ದರೆ ಸರಿಯಾಗುವುದಿಲ್ಲ. ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯಬೇಕು. ಸರ್ಕಾರಕ್ಕೆ ಚುರುಕು ಮುಟ್ಟಿಸಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಅವರು ಬಿಜೆಪಿ ಶಾಸಕರನ್ನು ಮಾತ್ರ ಕರೆದು ಸಭೆ ಮಾಡಿ ಹಣ ಬಿಡುಗಡೆಗೆ ಆದೇಶ ನೀಡುತ್ತಿದ್ದಾರೆ. ನೆರೆಗೆ ತುತ್ತಾದ ಪ್ರದೇಶಗಳ ಬಿಜೆಪಿ ಶಾಸಕರ ಪ್ರತಿ ಕ್ಷೇತ್ರಕ್ಕೆ ₹25 ಕೋಟಿ, ಅನರ್ಹ ಶಾಸಕರ ಕ್ಷೇತ್ರಗಳಿಗೂ ಇದೇ ರೀತಿ ನೆರವು ನೀಡುತ್ತಿದ್ದಾರೆ. ಅನರ್ಹ ಶಾಸಕರು ಬಿಜೆಪಿ ಜತೆ ಗುರುತಿಸಿಕೊಂಡ ನಂತರ ತಮ್ಮ ಕ್ಷೇತ್ರಗಳಿಗೆ ಅನುದಾನ ತರುವ ಮೂಲಕ ‘ಅರ್ಹ’ ಶಾಸಕರು ಎಂಬಂತೆ ತೋರಿಸಿಕೊಳ್ಳುತ್ತಿದ್ದಾರೆ. ನಾವು ಬರಿಗೈಯಲ್ಲಿ ನಿಂತಿದ್ದು, ‘ಅನರ್ಹ’ ಶಾಸಕರಂತಾಗಿದ್ದೇವೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಳಗಾವಿ ಅಧಿವೇಶನಕ್ಕೆ ಆಗ್ರಹ: ಸಭೆ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನೆರೆ ಹಾಗೂ ಬರದ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲೇ ಅಧಿವೇಶನ ಕರೆಯಬೇಕು. ಪ್ರವಾಹಕ್ಕೆ ತುತ್ತಾದ ಜನರಿಗೆ ಉತ್ತರ ಕೊಡಬೇಕಾಗುತ್ತದೆ ಎಂಬ ಭಯದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ. ಉತ್ತರ ಕರ್ನಾಟಕ ಜನರ ಬಗ್ಗೆ ಯಡಿಯೂರಪ್ಪ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಒಂದೂವರೆ ತಿಂಗಳಾಗಿದ್ದರೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ, ಪುನರ್ವಸತಿ ಕೇಂದ್ರಗಳನ್ನು ಮುಚ್ಚಲಾಗಿದೆ. ಈ ಬಗ್ಗೆ ಚರ್ಚೆ ಮಾಡಲು ಸರ್ವಪಕ್ಷಗಳ ಸಭೆಯನ್ನೂ ಕರೆಯುತ್ತಿಲ್ಲ. ಪರಿಹಾರಕ್ಕೆ ಒತ್ತಾಯಿಸಲು ಕೇಂದ್ರಕ್ಕೆ ನಿಯೋಗವನ್ನೂ ಕರೆದುಕೊಂಡು ಹೋಗುತ್ತಿಲ್ಲ ಎಂದು ಆರೋಪಿಸಿದರು.

‘ಸರ್ಕಾರ ಸತ್ತುಹೋಗಿದೆ. ದುರ್ಬಲ ಮುಖ್ಯಮಂತ್ರಿಯಿಂದಾಗಿ ಜನರು ನಲುಗಿದ್ದಾರೆ. ಪರಿಹಾರಕ್ಕೆ ಒತ್ತಾಯಿಸಿ ರಾಜ್ಯದಲ್ಲಿ ಆರಂಭಿಸುವ ಹೋರಾಟವನ್ನು ದೆಹಲಿ ಮಟ್ಟಕ್ಕೂ ತೆಗೆದುಕೊಂಡು ಹೋಗಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿಯಲ್ಲೇ ಹೋರಾಟ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಸೆ. 24ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.

‘ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು ಹಾಗೂ ಪಕ್ಷದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಲಾಗುವುದು’ ಎಂದು ಸಿದ್ದರಾಮಯ್ಯ ತಿಳಿಸಿದರು.

ನೆರವಿಗೆ ಬನ್ನಿ: ಪ್ರಧಾನಿಗೆ ರೈತನ ಪತ್ರ

ಬಾಗಲಕೋಟೆ: ತಕ್ಷಣ ನೆರೆ ಸಂತ್ರಸ್ತರ ನೆರವಿಗೆ ಬಂದು ಅವರ ಸಂಕಷ್ಟ ಪರಿಹರಿಸುವಂತೆ ಬಾದಾಮಿ ತಾಲ್ಲೂಕಿನ ಹಂಡರಗಲ್ ಗ್ರಾಮದ ರೈತ ಮಡಿವಾಳಯ್ಯ ಎಸ್.ಗಂಗೂರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

‘ಲಕ್ಷಾಂತರ ಜನರು ಬೀದಿಗೆ ಬಂದಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನೆರವಿಗೆ ಧಾವಿಸಿ, ಪರಿಹಾರ ಘೋಷಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನಿರ್ಣಯಗಳು

* ನೆರೆ ಹಾಗೂ ಬರದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಮಾಡಬೇಕು.

* ಪ್ರವಾಹ, ಬರ ಪೀಡಿತ ಪ್ರದೇಶಗಳಲ್ಲಿ ಹೋರಾಟ ರೂಪಿಸುವುದು.

*ಬರ ಪೀಡಿತ ತಾಲ್ಲೂಕುಗಳ ಘೋಷಣೆಗೆ ಆಗ್ರಹ.

* ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ನಿಲುವನ್ನು ಸಭೆ ಖಂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.