ADVERTISEMENT

ನಬಾರ್ಡ್‌ ಅನುದಾನ ಹೆಚ್ಚಳ: ನಿರ್ಮಲಾ ಸೀತಾರಾಮನ್‌ಗೆ ಕಾಂಗ್ರೆಸ್‌ ಸಂಸದರ ಮನವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 23:30 IST
Last Updated 4 ಫೆಬ್ರುವರಿ 2025, 23:30 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

(ಪಿಟಿಐ ಚಿತ್ರ)

ನವದೆಹಲಿ: ‘ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಒದಗಿಸಿರುವ ನಬಾರ್ಡ್ ನೆರವು ಕಡಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ನ ಸಂಸದರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಸಲ್ಲಿಸಿದರು. 

ADVERTISEMENT

‘2024–25ರ ಕೃಷಿ ಸಾಲಕ್ಕಾಗಿ ₹9,162 ಕೋಟಿ ಅನುದಾನ ನೀಡುವಂತೆ ಕೇಂದ್ರ ಸಚಿವರಿಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಆದರೆ, ನಬಾರ್ಡ್ ₹2,340 ಕೋಟಿ ಮಾತ್ರ ಮಂಜೂರು ಮಾಡಿದೆ. ಇದು ಕಳೆದ ವರ್ಷಕ್ಕಿಂತ ಶೇ 58ರಷ್ಟು ಕಡಿಮೆ. ಇದರಿಂದಾಗಿ, ರಾಜ್ಯದ ರೈತಾಪಿ ವರ್ಗದ ಆರ್ಥಿಕ ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೇ, ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ಸಾಲಮಿತಿಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ನಬಾರ್ಡ್ ಮತ್ತು ಆರ್‌ಬಿಐಗೆ ಸೂಚಿಸಬೇಕು’ ಎಂದು ಸಂಸದರು ಮನವಿ ಮಾಡಿದರು. 

ಎಲ್‌ಐಸಿ ಹಾಗೂ ಜೀವವಿಮಾ ಪ್ರತಿನಿಧಿಗಳ ಭವಿಷ್ಯಕ್ಕೆ ಮಾರಕವಾಗುವ ತಿದ್ದುಪಡಿಯಿಂದ ಪ್ರತಿನಿಧಿಗಳಿಗೆ ತೊಂದರೆಯಾಗಲಿದೆ. ವಿಮಾ ಸೆಕ್ಷನ್ 42(2) ತಿದ್ದುಪಡಿ ಪ್ರಸ್ತಾವನೆಯಂತೆ ಏಜೆಂಟ್‌ಗಳಿಗೆ ಬಹು ವಿಮಾ ಕಂಪನಿಗಳೊಂದಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದು ಸಾರ್ವಜನಿಕ ಸಂಸ್ಥೆಯಾದ ಎಲ್‌ಐಸಿಯ ಸ್ಥಿರತೆಯನ್ನು ಹಾಳು ಮಾಡುವ ಜೊತೆಗೆ, ಲಕ್ಷಾಂತರ ಏಜೆಂಟ್‌ಗಳ ಉದ್ಯೋಗ ಭದ್ರತೆಗೆ ಹಾಗೂ ಗ್ರಾಹಕರ ವಿಶ್ವಾಸಕ್ಕೆ  ಆಘಾತ ತರುವಂತಿದೆ’ ಎಂದು ಅವರು ಸಚಿವರ ಗಮನಕ್ಕೆ ತಂದರು. 

ನಿಯೋಗದಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ, ಶ್ರೇಯಸ್ ಎಂ‌. ಪಟೇಲ್‌, ಪ್ರಿಯಾಂಕಾ ಜಾರಕಿಹೊಳಿ, ಸಾಗರ್ ಖಂಡ್ರೆ, ಸುನೀಲ್ ಬೋಸ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.