ADVERTISEMENT

100 ಕಾಂಗ್ರೆಸ್ ಕಚೇರಿ; ವರಿಷ್ಠರಿಗೆ ಶೀಘ್ರ ವರದಿ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:30 IST
Last Updated 29 ಅಕ್ಟೋಬರ್ 2025, 16:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿ ನಿರ್ಮಿಸುವ ವಿಚಾರದಲ್ಲಿ ಸಚಿವರು, ಸಂಸದರು, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಯಾರ‍್ಯಾರು ಆಸಕ್ತಿ ತೋರಿದ್ದಾರೆ, ಯಾರು ತೋರಿಸಿಲ್ಲ ಎಂದು ವರದಿ ನೀಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಆ ವರದಿಯನ್ನು ಕಳುಹಿಸಿದ ನಂತರ ಶಂಕುಸ್ಥಾಪನೆಗೆ ದಿನ ನಿಗದಿ ಮಾಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.

‘ರಾಜ್ಯಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡುವ ಬಗ್ಗೆ ಇನ್ನೂ ದಿನಾಂಕ ಅಂತಿಮವಾಗಿಲ್ಲ’ ಎಂದೂ ಹೇಳಿದರು.

ADVERTISEMENT

8-10 ದಿನಗಳಲ್ಲಿ ಆಯ್ಕೆ: ‘ಪದವೀಧರ ಹಾಗೂ ಶಿಕ್ಷಕರ ಪ್ರತಿ ಕ್ಷೇತ್ರದಿಂದ ಐದಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. 8-10 ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಮುಂದಿನ ಸಭೆಯಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿಪ್ರಾಯ ಪಡೆಯುತ್ತೇವೆ’ ಎಂದು ಶಿವಕುಮಾರ್ ತಿಳಿಸಿದರು.

ಶ್ರೀರಾಮುಲು ಕೊಟ್ಟ ಹಣ ಬಿಹಾರಕ್ಕೆ: ‘ಬಿಹಾರ ಚುನಾವಣೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ₹ 300 ಕೋಟಿ ಕಪ್ಪ ಕಾಣಿಕೆ ನೀಡಿದ್ದಾರೆ’ ಎಂಬ ಬಿಜೆಪಿಯ ಬಿ. ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಶ್ರೀರಾಮುಲು ಅವರು ಕಾಂಗ್ರೆಸ್ ಪಕ್ಷಕ್ಕೆ ಹಣ ನೀಡಿದ್ದು, ಅದನ್ನೇ ನಾವು ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ’ ಎಂದು ವ್ಯಂಗ್ಯವಾಡಿದರು.

ನಾಯಕತ್ವ ಬದಲಾವಣೆ, ದಲಿತ ಮುಖ್ಯಮಂತ್ರಿ, ಸಂಪುಟ ಪುನರ್‌ ರಚನೆ ವಿಚಾರವಾಗಿ ಸಚಿವರ ಚರ್ಚೆ ಬಗ್ಗೆ ಕೇಳಿದಾಗ, ‘ಅನಗತ್ಯ ಮಾತನಾಡಿ ದಣಿವಾಗುವುದು ಬೇಡವೆಂದು ಮನವಿ ಮಾಡುತ್ತೇನೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.