ADVERTISEMENT

ಸುವರ್ಣ ವಿಧಾನಸೌಧದ ಹೊರಗೆ ಕಾಂಗ್ರೆಸ್‌, ಒಳಗೆ ವಿರೋಧ ಪಕ್ಷ ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:26 IST
Last Updated 17 ಡಿಸೆಂಬರ್ 2025, 15:26 IST
<div class="paragraphs"><p>ಬೆಳಗಾವಿಯ ಸುವರ್ಣ ವಿಧಾನಸೌಧ</p></div>

ಬೆಳಗಾವಿಯ ಸುವರ್ಣ ವಿಧಾನಸೌಧ

   

ಸುವರ್ಣ ವಿಧಾನಸೌಧ (ಬೆಳಗಾವಿ): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಇಲ್ಲಿನ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌ ನಾಯಕರು ಧರಣಿ ನಡೆಸಿದರೆ, ಸಮಯಕ್ಕೆ ಸರಿಯಾಗಿ ಕಲಾಪಕ್ಕೆ ಹಾಜರಾಗದ ಸಚಿವರು, ಕಾಂಗ್ರೆಸ್‌ ಸದಸ್ಯರ ಧೋರಣೆ ಖಂಡಿಸಿ ಬಿಜೆಪಿ–ಜೆಡಿಎಸ್‌ ಸದಸ್ಯರು ವಿಧಾನಪರಿಷತ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಕಲಾಪ ಆರಂಭವಾದಾಗ ಕಾಂಗ್ರೆಸ್‌ನ ಕೆ.ಶಿವಕುಮಾರ್, ರಾಮೋಜಿಗೌಡ ಹೊರತುಪಡಿಸಿ, ಉಳಿದ ಯಾವ ಸಚಿವರೂ, ಸದಸ್ಯರೂ ಹಾಜರಿರಲಿಲ್ಲ. ನಂತರ ಸಚಿವ ಸತೀಶ ಜಾರಕಿಹೊಳಿ ಬಂದರು. ಆಡಳಿತ ಪಕ್ಷದ ಧೋರಣೆಗೆ ವಿರೋಧ ಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಸಚೇತಕ ಎನ್‌.ರವಿಕುಮಾರ್, ಭಾರತಿಶೆಟ್ಟಿ, ಸಿ.ಟಿ.ರವಿ ಮತ್ತಿತರರು ಕಾಂಗ್ರೆಸ್ ನಡೆಯನ್ನು ಟೀಕಿಸಿದರು. ನಂತರ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಕಲಾಪವನ್ನು ಕೆಲ ಹೊತ್ತು ಮುಂದೂಡಿದರು.

ADVERTISEMENT

ಒಂದೂವರೆ ಗಂಟೆ ತಡವಾಗಿ ಕಲಾಪ ಆರಂಭವಾಯಿತು. ಆಗಲೂ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು. ‘ಸತ್ಯಕ್ಕೆ ಸಾವಿಲ್ಲ, ಸುಳ್ಳು ಪ್ರಕರಣಕ್ಕೆ ಆಯಸ್ಸಿಲ್ಲ’ ಎಂಬ ಫಲಕವನ್ನು ಕಾಂಗ್ರೆಸ್‌ ಸದಸ್ಯರು ಪ್ರದರ್ಶಿಸಿದರು. ತಡವಾಗಿ ಕಲಾಪ ಆರಂಭಕ್ಕೆ ಮನವಿ ಸಲ್ಲಿಸಿದ್ದರೂ ನಿಗದಿತ ಸಮಯಕ್ಕೆ ಆರಂಭಿಸಿದ ಸಭಾಪತಿ ವಿರುದ್ಧ ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹಮದ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.