ADVERTISEMENT

ಮೈತ್ರಿ ಸರ್ಕಾರ ಉರುಳಿಸಲು ಕಾಂಗ್ರೆಸ್ ಸಂಚು: ಸಿ.ಟಿ.ರವಿ ಆರೋಪ

ಬಿಜೆಪಿ‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 8:08 IST
Last Updated 22 ಏಪ್ರಿಲ್ 2019, 8:08 IST
   

ಮಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ನಾಯಕರು ಸಂಚು ನಡೆಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಈ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ‌.ರವಿ ಹೇಳಿದರು‌.

ಸೋಮವಾರ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, 'ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರಲು ಸರದಿಯಲ್ಲಿ ನಿಂತಿದ್ದಾರೆ. ಎಲ್ಲರೂ ಸೇರಿ ಮುಖ್ಯಮಂತ್ರಿಯವರ ಕುರ್ಚಿಗೆ ಟೈಮ್ ಬಾಂಬ್ ಇಟ್ಟು ಕಾಯುತ್ತಿದ್ದಾರೆ' ಎಂದು ಆರೋಪಿಸಿದರು.

ಸಿದ್ಧರಾಮಯ್ಯ ಮತ್ತು ಬೆಂಬಲಿಗರು ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಅವರು ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮೈತ್ರಿ ಸರ್ಕಾರ ಉರುಳಿಸುವುದಕ್ಕಾಗಿಯೇ ಈ ನಡೆ ಅನುಸರಿಸುತ್ತಿದ್ದಾರೆ ಎಂದರು.

ADVERTISEMENT

ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೇರಿಕೊಂಡು ಮುಖ್ಯಮಂತ್ರಿ ಹುದ್ದೆಯನ್ನೇ ಅಣಕಿಸುತ್ತಿದ್ದಾರೆ. ಸರ್ಕಾರ ಪತನವಾಗುವುದನ್ನೇ ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ ಎಂದು ಹೇಳಿದರು.

'ಮೈತ್ರಿ ಸರ್ಕಾರ ಪತನವಾದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಸಚಿವ ಎಚ್.ಡಿ.ರೇವಣ್ಣ ಹಿಡಿದಿರುವ ನಿಂಬೆಹಣ್ಣಿನ ಪರಿಣಾಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಅದು ಸಾಧ್ಯವಾಗುವುದಿಲ್ಲ. ಬಿಜೆಪಿಗೆ ಅದೃಷ್ಟವಿದೆ. ನಮ್ಮ ಪಕ್ಷ ಸರ್ಕಾರ ರಚಿಸುವುದು ಖಚಿತ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.