ADVERTISEMENT

ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ: ‘ಹೈಕಮಾಂಡ್‌’ ಅಂಗಳಕ್ಕೆ ‘ಕೈ’ ಬಿಕ್ಕಟ್ಟು 

ಮತ್ತೆ ದಲಿತ ಸಿ.ಎಂ ಕೂಗು, ಹಕ್ಕು ಪ್ರತಿಪಾದಿಸಿದ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 0:02 IST
Last Updated 24 ನವೆಂಬರ್ 2025, 0:02 IST
<div class="paragraphs"><p>ಸಿದ್ದರಾಮಯ್ಯ, ಡಿಕೆಶಿ</p></div>

ಸಿದ್ದರಾಮಯ್ಯ, ಡಿಕೆಶಿ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿದ್ದಂತೆಯೇ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ ಗೊಂದಲ, ಮತ್ತೆ ಕಾಂಗ್ರೆಸ್ ಹೈಕಮಾಂಡ್‌ ಅಂಗಳ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ‌ ಈ ವಿಚಾರದಲ್ಲಿ ‌ತಂತ್ರ– ಪ್ರತಿತಂತ್ರ ಹೂಡಿರುವ ಪರಿಣಾಮ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದ್ದು, ‘ಕೈ’ ವರಿಷ್ಠರು ಮಧ್ಯಪ್ರವೇಶಿಸುವ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ.  

ADVERTISEMENT

ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಭಾನುವಾರ ‌ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಏನೇ ಇದ್ದರೂ ಹೈಕಮಾಂಡ್‌ ನೋಡಿಕೊಳ್ಳುತ್ತದೆ’ ಎಂದಿದ್ದಾರೆ. ಆ ಮೂಲಕ, ಈ ವಿಚಾರದಲ್ಲಿ ಪಕ್ಷ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸುಳಿವು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಷಯ ಹಲವು ದಿನಗಳಿಂದ ತೀವ್ರವಾಗಿ ಚರ್ಚೆಯಾಗುತ್ತಿದ್ದರೂ ಮೌನ ವಹಿಸಿದ್ದ ಖರ್ಗೆ, ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

‘ನಿಮಗೆ (ಮಾಧ್ಯಮಗಳು) ಹೇಳಲು ನನ್ನ ಬಳಿ  ಏನೂ ಇಲ್ಲ. ಯಾವ ವಿಷಯವೂ ಇಲ್ಲದೆ ನಾನು ಏನಾದರೂ ಹೇಳಿದರೆ ಚೆನ್ನಾಗಿರುವುದಿಲ್ಲ. ಇಲ್ಲಿ ನಡೆದ ವಿದ್ಯಮಾನಗಳ ಬಗ್ಗೆಯೂ ಹೇಳುವಂಥದ್ದು ಇಲ್ಲ. ಏನಿದ್ದರೂ ಹೈಕಮಾಂಡ್ ಮಾಡುತ್ತದೆ’ ಎಂದು ಖರ್ಗೆ ಹೇಳಿದರು. 

ಈ ಬೆಳವಣಿಗೆಗಳ ಮಧ್ಯೆ, ದಲಿತ ಮುಖ್ಯಮಂತ್ರಿ ವಿಚಾರ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ಸಚಿವ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷೆಯನ್ನು ಪರೋಕ್ಷವಾಗಿ ಹೊರಹಾಕುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಅವರ ಬಯಕೆಗೆ ದನಿಗೂಡಿಸಿರುವ ಸಚಿವ ಸತೀಶ ಜಾರಕಿಹೊಳಿ, ‘ಸರ್ಕಾರ ರಚನೆ ಮಾಡುವಷ್ಟು ಪಕ್ಷವನ್ನು ಸಿದ್ಧಪಡಿಸಿದವರಲ್ಲಿ ಪರಮೇಶ್ವರ ಅವರೂ ಒಬ್ಬರು. ಅವರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ನನ್ನ ಒತ್ತಾಸೆ’ ಎಂದಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಅವರ ಜೊತೆ ಖರ್ಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಮ್ಮ ನಿವಾಸಕ್ಕೆ ಶನಿವಾರ ರಾತ್ರಿ ಕರೆಸಿಕೊಂಡಿದ್ದ ಖರ್ಗೆ, ಒಂದೂವರೆ ತಾಸು ಚರ್ಚೆ ನಡೆಸಿದ್ದರು. ಪಕ್ಷ ಮತ್ತು ಸರ್ಕಾರದಲ್ಲಿ ನಡೆಯುತ್ತಿರುವ ಆಂತರಿಕ ವಿದ್ಯಮಾನಗಳ ಕುರಿತು ಉಭಯ ನಾಯಕರು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಖರ್ಗೆ ಜೊತೆಗಿನ ಮಾತುಕತೆಯ ಬಳಿಕ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ‘ಹೈಕಮಾಂಡ್‌ ತೀರ್ಮಾನವನ್ನು ನಾನು, ಡಿ.ಕೆ. ಶಿವಕುಮಾರ್‌, ಎಲ್ಲ ನಾಯಕರೂ ಒಪ್ಪಲೇಬೇಕು’ ಎಂದಿದ್ದರು.

ಸಚಿವರಿಂದ ಖರ್ಗೆ ಭೇಟಿ: ಸಚಿವರಾದ ಎಚ್‌.ಸಿ. ಮಹದೇವಪ್ಪ, ಕೆ.ಜೆ ಜಾರ್ಜ್, ಕೆ. ವೆಂಕಟೇಶ್‌, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ಭೇಟಿ ಮಾಡಿದರು.

ಡಿಕೆಶಿ–ಜಾರ್ಜ್ ಭೇಟಿ: ಜ್ವರದಿಂದ ಬಳಲುತ್ತಿದ್ದ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ತೆರಳಿದ್ದರು. ಸಂಜೆ ಸಚಿವ ಕೆ.ಜೆ. ಜಾರ್ಜ್‌ ಅವರ ಸರ್ಕಾರಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಖರ್ಗೆ ಅವರು ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಅದಕ್ಕೂ ಮೊದಲು ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡುವ ಸಂಭವವಿದೆ.

ಖರ್ಗೆ ಭೇಟಿ ಬಳಿಕ ಮಾತನಾಡಿದ ಮಹದೇವಪ್ಪ, ‘ಇನ್ನೂ ಎರಡೂವರೆ ವರ್ಷ ಕಾಂಗ್ರೆಸ್ ಮುಖ್ಯಮಂತ್ರಿ ಇರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಸನ್ನಿವೇಶ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದರು. ಆದರೆ, ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುರಿಯುತ್ತಾರೆಯೇ’ ಎಂದು ಹಲವು ಬಾರಿ ಪ್ರಶ್ನಿಸಿದರೂ ಉತ್ತರಿಸದೆ ಜಾರಿಕೊಂಡರು. ಖರ್ಗೆ ಭೇಟಿಯ ಬಳಿಕ ಮುಖ್ಯಮಂತ್ರಿಯವರನ್ನೂ ಮಹದೇವಪ್ಪ ಭೇಟಿ ಮಾಡಿದರು.

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ನಮ್ಮ ಇಲಾಖೆಯಿಂದ ಇದೇ 28ರಂದು ಅಂಗನವಾಡಿ ಕಾರ್ಯಕ್ರಮ ಇದೆ. ಅದಕ್ಕೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೆ’ ಎಂದರು.

ನಾನೂ ರೇಸ್‌ನಲ್ಲಿದ್ದೇನೆ: ಪರಮೇಶ್ವರ

‘ನಾನು ಯಾವಾಗಲೂ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇದ್ದೇ ಇರುತ್ತೇನೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಸುದ್ದಿಗಾರರ ಜತೆ ತಮ್ಮ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು ‘2013ರಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆಗಲೂ ನಾನು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದೆ ಯಾವತ್ತಿಗೂ ಇರುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘2013ರಲ್ಲಿ ಎಲ್ಲರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂತು. ಅಧ್ಯಕ್ಷ ಆದವರಿಗೆ ಒಂದು ಅವಕಾಶ ಸಿಗುತ್ತಿತ್ತು. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ನಾನು ಆ ಚುನಾವಣೆಯಲ್ಲಿ ಸೋತಿದ್ದೆ. ನಾನು ಗೆದ್ದಿದ್ದರೆ ಏನಾಗುತ್ತಿತ್ತೋ ಅದು ಗೊತ್ತಿಲ್ಲ. ದಲಿತ ಮುಖ್ಯಮಂತ್ರಿ ಪ್ರಶ್ನೆ ಯಾವತ್ತಿಗೂ ಇದ್ದೇ ಇರುತ್ತದೆ. ಇದು ಹೊಸ ವಿಚಾರವಲ್ಲ. ನಾವು ಕೆಲವು ಸಚಿವರು ಒಟ್ಟಿಗೆ ಸೇರಿ ಊಟ ಮಾಡಿದಾಕ್ಷಣ ಇದೆಲ್ಲವೂ ಈಡೇರುತ್ತದೆಯೇ? ನಾವು ಊಟಕ್ಕೆ ಸೇರಿದಾಗ ರಾಜಕೀಯವನ್ನೂ ಮಾತನಾಡಿರುತ್ತೇವೆ. ರಾಜಕಾರಣಿಗಳಿಗೆ ಅದು ಸಹಜ’ ಎಂದು ಉತ್ತರಿಸಿದರು. ‘ಶಾಸಕಾಂಗ ಪಕ್ಷ ಸಭೆಯಲ್ಲಿ ನಾವೆಲ್ಲರೂ ಮುಖ್ಯಮಂತ್ರಿ ಅವರನ್ನು ಆಯ್ಕೆ ಮಾಡಿದ್ದೆವು. ಆಗ ಎರಡೂವರೆ ವರ್ಷ ಅಧಿಕಾರ ಹಂಚಿಕೆಯ ಚರ್ಚೆ ಆಗಿರಲಿಲ್ಲ. ದೆಹಲಿಯಲ್ಲಿ ಆ ಬಗ್ಗೆ ಚರ್ಚೆ ಆಗಿದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಏನೂ ಬದಲಾಗುವುದಿಲ್ಲ ಎಂದೂ ಹೇಳಲಾಗದು. ಬಂಗಾರಪ್ಪ ಅವರನ್ನು ಇಳಿಸಿ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಿಲ್ಲವೇ. ಆದರೆ ಅವೆಲ್ಲವೂ ಹೈಕಮಾಂಡ್‌ಗೆ ಬಿಟ್ಟದ್ದು’ ಎಂದರು. ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರೇ ಆಗಿದ್ದು ಇಲ್ಲಿನ ರಾಜಕಾರಣದ ಇಂಚಿಂಚೂ ಅವರಿಗೆ ಗೊತ್ತಿದೆ. ರಾಹುಲ್‌ ಗಾಂಧಿ ಅವರು ವಿದೇಶ ಪ್ರವಾಸದಿಂದ ವಾಪಸಾದ ನಂತರ ಖರ್ಗೆ ಅವರು ಇಲ್ಲಿನ ವಿದ್ಯಮಾನಗಳನ್ನು ವಿವರಿಸುತ್ತಾರೆ. ಗೊಂದಲಗಳಿದ್ದರೆ ರಾಹುಲ್‌ ಗಾಂಧಿ ಅವರು ಅವನ್ನು ಬಗೆಹರಿಸುತ್ತಾರೆ’ ಎಂದು ಹೇಳಿದರು.

'ಒಬ್ಬರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ’

ಬೆಳಗಾವಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೆ ಎಲ್ಲರ ಶ್ರಮವೂ ಇದೆ. ಯಾರೊ ಒಬ್ಬರ ಶ್ರಮ ಕಾರಣವಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು ‘ತನ್ನಿಂದಲೇ ಸರ್ಕಾರ ರಚನೆಯಾಗಿದೆ ಎಂದು ಯಾರಾದರೂ ಹೇಳಿದರೆ ಅದನ್ನು ನಾನು ಒಪ್ಪುವುದಿಲ್ಲ. ಅದು ನ್ಯಾಯವೂ ಅಲ್ಲ. ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಕಷ್ಟ ನಷ್ಟ ಅನುಭವಿಸಿದ್ದಾರೆ. ಯಾರೋ ಇಬ್ಬರು ಇದರ ‘ಕ್ರೆಡಿಟ್‌’ ತೆಗೆದುಕೊಳ್ಳಲು ಬರುವುದಿಲ್ಲ’ ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಟೀಕಿಸಿದರು.

‘ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷ ದುಡಿದಿದ್ದಾರೆ. ಅವರ ಕಾಲದಲ್ಲಿ ಮಾಡಿದ ಕಾರ್ಯಕ್ರಮಗಳಿಂದ ಪಕ್ಷಕ್ಕೆ ಬಲ ಬಂದಿದೆ. ಸರ್ಕಾರ ರಚನೆ ಮಾಡುವಷ್ಟು ಪಕ್ಷವನ್ನು ಸಿದ್ಧಪಡಿಸಿದವರಲ್ಲಿ ಅವರೂ ಒಬ್ಬರು. ಅವರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ನನ್ನ ಒತ್ತಾಸೆ’ ಎಂದರು. ‘ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ ಅವರು ಹಿಂದೆಯೂ ಹೇಳಿದ್ದಾರೆ. ಅದರಲ್ಲಿ ತಪ್ಪಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟರು ಅಲ್ಪಸಂಖ್ಯಾತ ಸಮುದಾಯದವರೇ ಮುಖ್ಯ ಮತದಾರರು. ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು. ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ವಿಚಾರ ನನಗೆ ಗೊತ್ತಿಲ್ಲ’ ಎಂದರು.

‘ತೇನ್‌ಸಿಂಗ್‌ ಜತೆ ಹಿಮಾಲಯ ಏರಿದವರಿಗೆ ಬೆಲೆ ಇಲ್ಲವೇ?’: ‘1960ರಲ್ಲಿ ತೇನ್‌ಸಿಂಗ್ ನೋರ್ಗೆ ಹಿಮಾಲಯ ಪರ್ವತ ಏರಿದರು. ಆಗ ಜಗತ್ತಿನ ಎಲ್ಲ ಪತ್ರಿಕೆಗಳೂ ತೇನ್‌ಸಿಂಗ್ ಬಗ್ಗೆ ಬರೆದವು. ಅವರ ಜತೆ ಇನ್ನೂ 14 ಜನರೂ ಇದ್ದರು. ಅವರ ಹೆಸರು ಎಲ್ಲೂ ಬರಲಿಲ್ಲ. ಇದು ಹಾಗೇ ಆಗಿದೆ’ ಎಂದು ಡಿ.ಕೆ.ಶಿವಕುಮಾರ್‌ ಅವರ ಹೆಸರು ಹೇಳದೆ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.