ADVERTISEMENT

ಸಿ.ಎಂ ಅಭ್ಯರ್ಥಿ ಹೇಳಿಕೆ: ಬೆಂಬಲಿಗರ ಬಾಯಿ ಮುಚ್ಚಿಸಲು ರಾಹುಲ್‌ ಸೂಚನೆ

ವರಿಷ್ಠರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ಡಿಕೆಶಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 20:07 IST
Last Updated 20 ಜುಲೈ 2021, 20:07 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಹೈಕಮಾಂಡ್‌ ಸೂಚನೆಯ ಮೇರೆಗೆ ಇಲ್ಲಿಗೆ ಬಂದಿರುವ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು, ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿಯ ಕುರಿತು ಚರ್ಚಿಸಿದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದ ಬಗ್ಗೆ ಹೇಳಿಕೆ ನೀಡದಂತೆ ಬೆಂಬಲಿಗರಿಗೆ ತಾಕೀತು ಮಾಡುವಂತೆಯೂ ಸೂಚಿಸಿದ ರಾಹುಲ್‌, ಸಾಮೂಹಿಕ ನಾಯಕತ್ವದಡಿ ವಿಧಾನಸಭೆ ಚುನಾವಣೆ ಎದುರಿಸುವಂತೆ ಕಿವಿಮಾತು ಹೇಳಿದರು ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸಂಬಂಧ ಬಿಜೆಪಿ ಆಲೋಚಿಸುತ್ತಿದ್ದು, ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಜನರೂ ಬೇಸತ್ತಿದ್ದಾರೆ. ಈ ಸಂದರ್ಭದ ಲಾಭ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಅವರು ಉಭಯ ಮುಖಂಡರಿಗೆ ತಿಳಿಹೇಳಿದರು.

ADVERTISEMENT

ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬ ಕುರಿತು ಅನಗತ್ಯ ಗೊಂದಲಕ್ಕೆ ಅವಕಾಶ ನೀಡಕೂಡದು. ಎಲ್ಲರೊಂದಿಗೆ ಕೈಜೋಡಿಸಿ ಗೆಲುವಿಗೆ ಯತ್ನಿಸಬೇಕು ಎಂದೂ ಅವರು ಸಲಹೆ ನೀಡಿದರು ಎಂದು ತಿಳಿದುಬಂದಿದೆ.

ಮಧ್ಯಂತರ ಚುನಾವಣೆಯ ಸಾಧ್ಯತೆ ಇರುವುದರಿಂದ ಸೂಕ್ತ ತಯಾರಿ ನಡುಸುವಂತೆ ಸೂಚಿಸಿದ ಅವರು, ಬೆಂಬಲಿಗರ ಅನಗತ್ಯ ಹೇಳಿಕೆಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಧೋರಣೆಯನ್ನು ಜನತೆಗೆ ಮನವರಿಕೆ ಮಾಡಿಕೊಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಭೆಯಲ್ಲಿ ಹಾಜರಿದ್ದರು.

ಪ್ರತ್ಯೇಕ ಸಭೆ:ಮೊದಲು ಇಬ್ಬರೂ ನಾಯಕರೊಂದಿಗೆ ಸಭೆ ನಡೆಸಿದ ರಾಹುಲ್‌, ಬಳಿಕ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾಗಿ ತಿಳಿದುಬಂದಿದೆ.

ಬಣ ರಾಜಕೀಯಕ್ಕೆ ಒತ್ತು ನೀಡುವ ಮೂಲಕ ಗೊಂದಲ ಸೃಷ್ಟಿಸಕೂಡದು ಎಂದೂ ಅವರು ತಾಕೀತು ಮಾಡಿದರು ಎನ್ನಲಾಗಿದೆ.

ಶಾಸಕರೇ ನಿರ್ಧರಿಸಲಿದ್ದಾರೆ: ಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸಬೇಕು ಎಂಬ ಪ್ರಶ್ನೆಯೇ ಇಲ್ಲ. ಬದಲಿಗೆ, ಕಾಂಗ್ರೆಸ್‌ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಮುಖ್ಯ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೆವಾಲಾ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷವು ಚುನಾವಣೆಯಲ್ಲಿ 130ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಶಾಸಕರು ನಿರ್ಧರಿಸಲಿದ್ದಾರೆ. ಆಗಲೂ ಗೊಂದಲ ಮುಂದುವರಿದರೆ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಕುರಿತ ಚರ್ಚೆ ಈಗ ಅನಗತ್ಯ ಎಂದು ಅವರು ಹೇಳಿದರು.

‘ಸಾಮೂಹಿಕ ನಾಯಕತ್ವ ನಂಬಿಕೆ ಇರುವ ಪಕ್ಷ ಕಾಂಗ್ರೆಸ್‌. ಒಂದಾಗಿ ಕೆಲಸ ಮಾಡುವಂತೆ ವರಿಷ್ಠರು ಸೂಚಿಸಿದ್ದು, ಅದನ್ನು ಪ್ರತಿಯೊಬ್ಬರೂ ಪಾಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

‘ರಾಜಕಾರಣದಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಪ್ರಜಾತಂತ್ರದಲ್ಲಿ ಭಿನ್ನಾಭಿಪ್ರಾಯ ಇರಲೇಬೇಕು. ಇದೇ ವಿಷಯವನ್ನು ದೊಡ್ಡದಾಗಿ ಬಿಂಬಿಸಬೇಕಿಲ್ಲ. ವರಿಷ್ಠರು ನೀಡಿರುವ ಸಲಹೆಯನ್ನು ಎಲ್ಲರೂ ಬೆಂಬಲಿಸಲಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.