ADVERTISEMENT

ರಾಜಭವನ ಚಲೋಗೆ ಕಾಂಗ್ರೆಸ್‌ ಸಿದ್ಧತೆ: ಕೆಪಿಸಿಸಿ ಕಚೇರಿಯತ್ತ ಕಾರ್ಯಕರ್ತರ ದಂಡು

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 7:11 IST
Last Updated 16 ಜೂನ್ 2022, 7:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯವು ನಿರಂತರವಾಗಿ ಸಮನ್ಸ್‌ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ರಾಜಭವನ ಚಲೋ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಯಿಂದಲೇ ರಾಜಭವನ ಚಲೋ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬುಧವಾರ ಪ್ರಕಟಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕೆಪಿಸಿಸಿ ಕಚೇರಿಯತ್ತ ದೌಡಾಯಿಸುತ್ತಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಕೆಪಿಸಿಸಿ ಕಚೇರಿಯನ್ನು ತಲುಪಿದ್ದಾರೆ. ನಗರದ ವಿವಿಧೆಡೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಅಲ್ಲಿಗೆ ಬಂದು ಸೇರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್‌, ಧ್ರುವನಾರಾಯಣ, ಈಶ್ವರ ಖಂಡ್ರೆ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ಬಿಗಿ ಪೊಲೀಸ್‌ ಬಂದೋಬಸ್ತ್‌: ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ರಾಜಭವನ ಮುತ್ತಿಗೆಯನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ. ಕೆಪಿಸಿಸಿ ಕಚೇರಿಯಿಂದ ರಾಜಭವನ ತಲುಪುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ರಾಜಭವನವನ್ನು ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲೂ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು ಕಾಂಗ್ರೆಸ್‌ ಪಕ್ಷದ ಪ್ರತಿಭಟನೆ ನಿಯಂತ್ರಣಕ್ಕೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.