ADVERTISEMENT

40 ಪರ್ಸೆಂಟ್‌ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದ ಎಂ.ಟಿ.ಬಿ. ನಾಗರಾಜ್: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2022, 11:59 IST
Last Updated 29 ಅಕ್ಟೋಬರ್ 2022, 11:59 IST
   

ಬೆಂಗಳೂರು:ಹೃದಯಾಘಾತದಿಂದ ಮೃತಪಟ್ಟಕೆ.ಆರ್.ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಅವರಿಗೆ ಸಂಬಂಧಿಸಿದಂತೆಸಚಿವ ಎಂ.ಟಿ.ಬಿ. ನಾಗರಾಜ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಅಮಾನತುಗೊಂಡಿದ್ದ ಇನ್‌ಸ್ಪೆಕ್ಟರ್‌ ನಂದೀಶ್ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದರು. ಅಂತಿಮ ದರ್ಶನ ಪಡೆಯಲು ಬಂದಿದ್ದ ವೇಳೆ ಸಚಿವ ಎಂ.ಟಿ.ಬಿ. ನಾಗರಾಜ್ ಅವರು, 'ಇನ್‌ಸ್ಪೆಕ್ಟರ್‌ ಹುದ್ದೆಗೆ ₹70 ರಿಂದ ₹80 ಲಕ್ಷ ಕೊಟ್ಟು ಬಂದರೆ ಹೃದಯಾಘಾತವಾಗದೆ ಇನ್ನೇನಾಗುತ್ತದೆ' ಎಂದು ಹೇಳಿದ್ದರು. ಈ ವಿಡಿಯೊ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌,'ಸಚಿವ ಎಂ.ಟಿ.ಬಿ. ನಾಗರಾಜ್ ಅವರು 40 ಪರ್ಸೆಂಟ್‌ ಸರ್ಕಾರದ ಭ್ರಷ್ಟಾಚಾರವನ್ನು ನೇರಾನೇರವಾಗಿ ಬಯಲಿಗಿಟ್ಟಿದ್ದಾರೆ.ನೇಮಕಾತಿ ಅಕ್ರಮ, ವರ್ಗಾವಣೆ ದಂಧೆಗಳು ನಡೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಪೇ ಸಿಎಂ ಎಂದಾಕ್ಷಣ ಉರಿದು ಬೀಳುವ ಬಸವರಾಜ ಬೊಮ್ಮಾಯಿ ಅವರೇ, ಪೋಸ್ಟಿಂಗ್ ಪಡೆಯಲು ₹ 70, 80 ಲಕ್ಷ ನೀಡಿದ್ದು ಯಾರಿಗೆ? ಯಾರು ಈ ಡೀಲಿಂಗ್ ಮಾಡುವುದು?' ಎಂದು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಸರ್ಕಾರದ ಲಂಚದ ಬಾಕ್ಸ್ ಬೇಡ, ನಮ್ಮ ಲಂಚ್ ಬಾಕ್ಸ್ ಅಷ್ಟೇ ಸಾಕು ಎನ್ನುವ ಪ್ರಾಮಾಣಿಕ ಪತ್ರಕರ್ತರಿಂದ ಸರ್ಕಾರದ ಮಹಾ ಅಕ್ರಮ ಹೊರಬಿದ್ದಿದೆ. ಸುಧಾಕರ್‌ ಅವರೇ,ಸ್ಕಾಚ್, ವಾಚ್, ಗೋಲ್ಡ್ ಕಾಯಿನ್ ಅಲ್ಲದೆ ಇನ್ನೂ ಏನೇನಿದೆ ಈ ಬಾಕ್ಸ್‌ನಲ್ಲಿ?ಎಲ್ಲವನ್ನೂ ಹಣದಿಂದ ಖರೀದಿಸುತ್ತೇವೆ ಎಂಬ ಧಿಮಾಕು ಬಿಜೆಪಿಗೆ ಬಂದಿರುವುದು ಭ್ರಷ್ಟಾಚಾರದಿಂದ' ಎಂದು ವಾಗ್ದಾಳಿ ನಡೆಸಿದೆ.

ವಿವಿಧ ಹಗರಣಗಳ ಕುರಿತು ಕಾಂಗ್ರೆಸ್‌ ಮಾಡಿದ್ದ ಆರೋಪಗಳನ್ನು ಅಲ್ಲಗಳೆದಿದ್ದ ಬಿಜೆಪಿ, ಕಾಂಗ್ರೆಸ್‌ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ ಎಂದು ಹೇಳಿತ್ತು.

ಈ ಕುರಿತೂ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ಪಿಎಸ್‌ಐ ಅಕ್ರಮ ನಡೆದಾಗ,ಬೋರ್‌ವೆಲ್ ಅಕ್ರಮ ನಡೆದಾಗ,ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ,ಗಂಗಾ ಕಲ್ಯಾಣ ಹಗರಣ ನಡೆದಾಗ, ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ಬಿಜೆಪಿ.ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಇದೂ ಬಯಲಾಗಲಿದೆ.ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ' ಎಂದು ಎಚ್ಚರಿಸಿದೆ.

ಅವಧಿ ಮೀರಿ ತಡರಾತ್ರಿ ವರೆಗೂ ವಹಿವಾಟು ನಡೆಸುತ್ತಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಇನ್‌ಸ್ಪೆಕ್ಟರ್‌ ನಂದೀಶ್ ಅವರನ್ನು ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.