
ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಅವರನ್ನು ಪದಚ್ಯುತಿಗೊಳಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ಪ್ರಾಣೇಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ಐವನ್ ಡಿಸೋಜ ನೇತೃತ್ವದಲ್ಲಿ 10 ಸದಸ್ಯರು ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಮಾರ್ಚ್ 6ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲೇ ನೂತನ ಉಪಸಭಾಪತಿ ಆಯ್ಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಬಸವರಾಜ ಹೊರಟ್ಟಿ ಅವರನ್ನು ಹೊರತುಪಡಿಸಿ ಬಿಜೆಪಿ 29 ಸದಸ್ಯ ಬಲವನ್ನು ಹೊಂದಿದೆ. ಬಿಜೆಪಿ ಮೈತ್ರಿಕೂಟದ ಜೆಡಿಎಸ್‌ನ ಏಳು ಸದಸ್ಯರಿದ್ದಾರೆ. ಎರಡೂ ಪಕ್ಷಗಳು ಒಟ್ಟು ಬಲ 36 ರಷ್ಟಿದೆ. ಕಾಂಗ್ರೆಸ್ 37 ಸದಸ್ಯ ಬಲಹೊಂದಿದ್ದು ಮಿತ್ರ ಪಕ್ಷಗಳಿಗಿಂತ ಒಂದು ಸ್ಥಾನ ಹೆಚ್ಚು ಹೊಂದಿದೆ. ಒಬ್ಬರು ಪಕ್ಷೇತರ ಸದಸ್ಯ ಇದ್ದಾರೆ.
ಬಿಜೆಪಿ–ಜೆಡಿಎಸ್‌ಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚು ಇರುವುದರಿಂದ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಅವರತ್ತ ವಿರೋಧ ಪಕ್ಷಗಳ ಮೈತ್ರಿಕೂಟ ಚಿತ್ತ ನೆಟ್ಟಿವೆ. ಕಾಂಗ್ರೆಸ್ ಸಹ ಅವರನ್ನು ಸೆಳೆಯಲು ಮುಂದಾಗಿದೆ. ಒಂದು ವೇಳೆ ಲಖನ್ ಕಾಂಗ್ರೆಸ್ ಜತೆ ಕೈಜೋಡಿಸಿದರೆ ಪ್ರಾಣೇಶ್ ಅವರ ಪದಚ್ಯುತಿಯ ದಾರಿ ಸುಗಮವಾಗಲಿದೆ.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ತಮ್ಮ. ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಸತೀಶ ಅವರೇ ಬೆಳಗಾವಿಯಿಂದ ಲಖನ್ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು. ಹಾಗಿದ್ದರೂ, ಲಖನ್ ಅವರು ಎರಡೂ ಪಕ್ಷಗಳಿಂದ ಅಂತರವನ್ನು ಕಾಯ್ದುಕೊಂಡೇ ಬಂದಿದ್ದಾರೆ. ಈಗ ಶುರುವಾಗಿರುವ ಉಪಸಭಾಪತಿ ಪದಚ್ಯುತಿಯ ಪ್ರಯತ್ನದಲ್ಲಿ ಅವರ ನಿರ್ಣಯವೇ ಪ್ರಮುಖ ಪಾತ್ರ ವಹಿಸಲಿದೆ. ಬಿಜೆಪಿ–ಜೆಡಿಎಸ್ ಜತೆ ಸೇರಿಕೊಂಡರೆ ಸಮಬಲವಾಗುತ್ತದೆ. ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿವೇಚನಾ ಮತ ನಿರ್ಣಾಯಕ ಪಾತ್ರ ವಹಿಸಲಿದೆ.
ಉಪ ಸಭಾಪತಿ ಪದಚ್ಯುತಿಗಾಗಿ ಕಾಂಗ್ರೆಸ್ ಮಂಡಿಸುವ ನಿರ್ಣಯದ ಪರ ಲಖನ್ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡು ಕಾಂಗ್ರೆಸ್ ತನ್ನ ಚಟುವಟಿಕೆ ತೀವ್ರಗೊಳಿಸಿದೆ. ಒಂದು ವೇಳೆ ಲಖನ್ ಕೈಕೊಟ್ಟರೆ ಸಭಾಪತಿ ಅವರ ವಿವೇಚನಾ ಮತ ಆಸರೆಯಾಗಬಹುದು ಎನ್ನುವ ಲೆಕ್ಕಾಚಾರ ಇಟ್ಟುಕೊಂಡಿದೆ. ಅದಕ್ಕಾಗಿಯೇ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಪದಚ್ಯುತಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿಲ್ಲ.
‘ಒಂದು ವೇಳೆ ಸಭಾಪತಿ ಅವರ ವಿವೇಚನಾ ಮತವು ಪ್ರಾಣೇಶ್ ಅವರನ್ನು ಉಳಿಸಿದರೆ ಕೆಲ ತಿಂಗಳ ನಂತರ ಕಾಂಗ್ರೆಸ್ ಬಲ ಹೆಚ್ಚಾಗಲಿದ್ದು, ಆ ನಂತರವೇ ಸಭಾಪತಿ ಮತ್ತು ಉಪ ಸಭಾಪತಿ ಇಬ್ಬರ ವಿರುದ್ಧವೂ ಪದಚ್ಯುತಿ ನಿರ್ಣಯ ಮಂಡಿಸಲು ಪಕ್ಷದ ನಾಯಕರು ಸೂಚಿಸಿದ್ದಾರೆ. ಒಂದು ವೇಳೆ ಸಭಾಪತಿ ಸಹಕಾರ ದೊರೆತರೆ ಅವರನ್ನು ಮುಂದುವರಿಸಲು ಆಲೋಚಿಸಲಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.