ADVERTISEMENT

₹210 ಕೋಟಿ ಕಿಕ್‌ ಬ್ಯಾಕ್‌: ಬಿ.ಸಿ.ಪಾಟೀಲ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2021, 13:49 IST
Last Updated 8 ಸೆಪ್ಟೆಂಬರ್ 2021, 13:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೃಷಿ ಯಂತ್ರೋಪಕರಣ ಖರೀದಿಯಲ್ಲಿ ₹210 ಕೋಟಿ ಕಿಕ್‌ಬ್ಯಾಕ್‌ ಪಡೆದ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ರಾಜೀನಾಮೆ ಪಡೆದು ತನಿಖೆ ನಡೆಸುತ್ತಾರೆಯೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ರೈತರನ್ನು 'ಹೇಡಿಗಳು' ಎಂದು ಕರೆದು ಅವಮಾನಿಸಿದ್ದ ಬಿ.ಸಿ.ಪಾಟೀಲ ಅವರೇ, ಈಗ ನಿಮ್ಮನ್ನು ನೀವು 'ಭ್ರಷ್ಟ' ಎಂದು ಕರೆದುಕೊಳ್ಳುವ ನೈತಿಕತೆ ತೋರುವಿರಾ? ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

ಸ್ವೆಟರ್‌ ಹಗರಣದಲ್ಲಿ ಆರ್‌.ಅಶೋಕ ಅವರ ಕೈವಾಡ, ಮೊಟ್ಟೆ ಹಗರಣದಲ್ಲಿ ಶಶಿಕಲಾ ಜೊಲ್ಲೆ ಅವರ ಕೈವಾಡ, ಕೃಷಿ ಯಂತ್ರ ಖರೀದಿಯಲ್ಲಿ ಬಿ.ಸಿ.ಪಾಟೀಲ ಕಿಕ್‌ ಬ್ಯಾಕ್‌. ಬಿಜೆಪಿ ಸರ್ಕಾರದ ಪ್ರತಿ ಇಲಾಖೆಯಲ್ಲಿಯೂ ಲೂಟಿ ಎಗ್ಗಿಲ್ಲದೆ ಸಾಗಿದೆ. ಇವರ ತನಿಖೆ ನಡೆಸದೆ ಹಗರಣ ಮುಚ್ಚಿ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ADVERTISEMENT

ರಾಜ್ಯದಲ್ಲಿ ಹಲವು ಸೋಂಕುಗಳು ತಾಂಡವವಾಡುತ್ತಿವೆ, ಆದರೆ ಬಿಜೆಪಿಗೆ ಭ್ರಷ್ಟಾಚಾರದ ಸೋಂಕು ತಗುಲಿದೆ. ಈ ಸೋಂಕಿತರ ಸರ್ಕಾರದಿಂದ ರಾಜ್ಯ ನಲುಗುತ್ತಿದೆ ಎಂದು ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಬೊಮ್ಮಾಯಿ ಅವರು ಭ್ರಷ್ಟಾಚಾರಕ್ಕೆ ಮೌನ ಸಮ್ಮತಿ ತೋರುವರೆ? ಎಂದಿದೆ.

ಭ್ರಷ್ಟಾಚಾರವನ್ನೇ ಹಾಸಿ ಹೊದ್ದಿರುವ ಬಿಜೆಪಿಯಿಂದ ರಾಜ್ಯದ ಅಭಿವೃದ್ಧಿ ಕನಸು ಮಾತ್ರ. ರೈತರ ಸಂಕಷ್ಟಕ್ಕೆ ನೆರವಿಗೆ ನಿಲ್ಲಬೇಕಾದ ಹೊತ್ತಿನಲ್ಲಿ ರೈತರ ಹೆಸರಲ್ಲಿ ಬಿಜೆಪಿ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಹೇಳಿದೆ.

ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯ್ತಿ ದರದಲ್ಲಿ ವಿತರಿಸುವ ಯಂತ್ರೋಪಕರಣಗಳ ಖರೀದಿಯಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ ₹ 210 ಕೋಟಿ ಮೊತ್ತದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ಪಡೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ಎನ್‌. ಕೃಷ್ಣಮೂರ್ತಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.