ADVERTISEMENT

ಮೂರು ಭಾಗವಾಗಲಿದೆ ಕಾಂಗ್ರೆಸ್‌: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 14:09 IST
Last Updated 18 ಜನವರಿ 2024, 14:09 IST
ಡಿ.ವಿ. ಸದಾನಂದ ಗೌಡ
ಡಿ.ವಿ. ಸದಾನಂದ ಗೌಡ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಓಲೈಕೆಗೆ ಅವರ ಸಂಪುಟದ ಸಚಿವರೇ ಪೈಪೋಟಿಗೆ ಇಳಿದಿದ್ದಾರೆ. ಶ್ರೀರಾಮನ ಕುರಿತು ಟೀಕೆ ಮಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ಕಾಂಗ್ರೆಸ್‌ ಪಕ್ಷ ಮೂರು ಹೋಳಾಗಲಿದೆ ಎಂದು ಬಿಜೆಪಿ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪರವಾಗಿ ಕೆಲವರು, ಡಿ.ಕೆ.ಶಿವಕುಮಾರ್ ಪರವಾಗಿ ಕೆಲವರು ಕೆಲಸ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ. ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರ ಗೋಧ್ರಾ ಹೇಳಿಕೆ, ಸಹಕಾರ ಸಚಿವ ಕೆ.ಎನ್‌. ರಾಜಣ್ಣನ ಹೇಳಿಕೆ ಗಮನಿಸಿದ ಜನರು ಸುಮ್ಮನೆ ಇರಲಾರರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಣ್ಣ ಅವರಿಂದ ಕ್ಷಮೆ ಕೇಳಿಸಬೇಕು. ಇಲ್ಲವೇ, ಮುಖ್ಯಮಂತ್ರಿಯೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕೋಲಾರದ ಮುಳಬಾಗಿಲಿನಲ್ಲಿ ಬ್ಯಾನರ್ ಹರಿಯಲಾಗಿದೆ. ಈ ಸಂಬಂಧ ಎಷ್ಟು ಜನರನ್ನು ಬಂಧಿಸಲಾಗಿದೆ? ಶ್ರೀರಾಮನ  ಪೋಸ್ಟರ್‌, ಬ್ಯಾನರ್‌ಗಳನ್ನು ಏಜೆಂಟರ ಮೂಲಕ ಹರಿಸುತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರ ಫೋಟೊ ಇರುವ ಬ್ಯಾನರ್‌ಗಳೂ ಹರಿದುಹೋಗುವ ದಿನಗಳು ಬರಲಿವೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಹೇಳಿದರು.

ADVERTISEMENT

ರಾಮನೇ ಇಲ್ಲ ಎಂದು ಅಫಿಡವಿಟ್‌ ಹಾಕಿದ್ದ ಅಯೋಗ್ಯರು ಇಂಥ ಹೇಳಿಕೆ ಕೊಡುವುದು ಅಚ್ಚರಿಯ ವಿಚಾರವಲ್ಲ. ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲ ಅವರಂಥ ವ್ಯಕ್ತಿ ಪ್ರಧಾನಿಯ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಕರ್ನಾಟಕದ ಕಾಂಗ್ರೆಸ್‌ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.