ADVERTISEMENT

ತಪ್ಪಿದ ಲಂಡನ್‌ ಪ್ರವಾಸ: ₹ 2 ಲಕ್ಷ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

ಥಾಮಸ್‌ ಕುಕ್‌ ಕಂಪನಿ ವಿರುದ್ಧದ ದೂರು

ಬಿ.ಎಸ್.ಷಣ್ಮುಖಪ್ಪ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ವಿದೇಶದಲ್ಲಿ ಒಳ್ಳೆ ಊಟ ಕೊಡಿಸಲಿಲ್ಲ, ಉಳಿದುಕೊಳ್ಳಲಿಕ್ಕೆ ನಚ್ಚನೆಯ ತಾವು ನೀಡಲಿಲ್ಲ, ಮುಖ್ಯವಾಗಿ ಲಂಡನ್‌ ವೀಕ್ಷಣೆಯಿಂದ ನನ್ನನ್ನು ವಂಚಿತರನ್ನಾಗಿಸಿದ್ದಾರೆ, ಒಡಂಬಡಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಮಾನಸಿಕ ಯಾತನೆ ಉಂಟು ಮಾಡಿದ್ದಾರೆ, ದಯವಿಟ್ಟು ಪರಿಹಾರ ಕೊಡಿಸಿ...’ ಎಂಬ ಅಳಲಿಗೆ ಸ್ಪಂದಿಸಿರುವ ಗ್ರಾಹಕರ ಆಯೋಗ, ದೂರುದಾರರಿಗೆ ₹ 2 ಲಕ್ಷ ಪರಿಹಾರ ನೀಡುವಂತೆ ಗ್ರಾಹಕರಿಗೆ ಪ್ರವಾಸ ಸೇವೆ ಒದಗಿಸುವ ‘ಥಾಮಸ್‌ ಕುಕ್‌ ಕಂಪನಿ’ಗೆ ಆದೇಶಿಸಿದೆ.

ಕಾಚರಕನಹಳ್ಳಿಯ ‘ಭಾನು ಪ್ರೈಡ್ ಅಪಾರ್ಟ್‌ಮೆಂಟ್‌’ ನಿವಾಸಿ ಕೆ.ರುದ್ರಮೂರ್ತಿ (50) ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ, ಬೆಂಗಳೂರು ಮೊದಲನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಬಿ.ನಾರಾಯಣಪ್ಪ, ಸದಸ್ಯರಾದ ಎನ್‌.ಜ್ಯೋತಿ ಹಾಗೂ ಎಸ್‌.ಎಂ.ಶರಾವತಿ ಇತ್ತೀಚೆಗೆ ಈ ಕುರಿತಂತೆ ಆದೇಶಿಸಿದ್ದಾರೆ.

ADVERTISEMENT

‘ಆರೋಪ ಸಾಬೀತಾಗಿರುವ ಕಾರಣ ಥಾಮಸ್‌ ಕುಕ್‌ (ಇಂಡಿಯಾ) ಕಂಪನಿಯು, ದೂರುದಾರರಿಗೆ ₹ 2 ಲಕ್ಷ ಪರಿಹಾರ, ಸೇವಾ ನ್ಯೂನ್ಯತೆಗಾಗಿ ₹ 1 ಲಕ್ಷ ಮತ್ತು ವ್ಯಾಜ್ಯದ ವೆಚ್ಚವಾಗಿ ₹ 5 ಸಾವಿರ ಮೊತ್ತವನ್ನು ‌ಈ ಆದೇಶ ಕೈಸೇರಿದ ದಿನದಿಂದ ಎರಡು ತಿಂಗಳ ಒಳಗಾಗಿ, ವಾರ್ಷಿಕ ಶೇ 10ರ ಬಡ್ಡಿ ದರದಲ್ಲಿ ಪಾವತಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?: ರಜಾ ದಿನಗಳ ‘ಗ್ರ್ಯಾಂಡ್‌ ಬಾರ್ಗೈನ್‌ ಟೂರ್ ಆಫ್‌ ಯುರೋಪ್–ದಕ್ಷಿಣ ವಿಶೇಷ’ ಎಂಬ ಆಕರ್ಷಕ ವಾಕ್ಯದಡಿ ಥಾಮಸ್‌ ಕುಕ್‌ (ಇಂಡಿಯಾ) ಲಿಮಿಟೆಡ್‌ ಕಂಪನಿಯು 14 ದಿನ ಹಾಗೂ 15 ರಾತ್ರಿಗಳ ಯುರೋಪ್‌ ಪ್ರವಾಸವನ್ನು ಆಯೋಜಿಸಿತ್ತು. ಜಿಎಸ್‌ಟಿ ಮತ್ತು ಟಿಎಸ್‌ಟಿ ಒಳಗೊಂಡಂತೆ ತಲಾ ₹ 3,79,535 ನಿಗದಿಪಡಿಸಲಾಗಿತ್ತು. ಪ್ರವಾಸದ ಪ್ಯಾಕೇಜ್‌ನಲ್ಲಿ ಲಂಡನ್, ಪ್ಯಾರಿಸ್‌, ಬೆಲ್ಜಿಯಂ, ನೆದರ್‌ಲ್ಯಾಂಡ್‌, ಜರ್ಮನಿ, ಸಿಟ್ಜರ್‌ಲ್ಯಾಂಡ್‌, ಆಸ್ಟ್ರಿಯಾ, ವೆನಿಸ್, ಫ್ಲೋರೆನ್ಸ್ ನಗರ, ರೋಮ್‌ ಹಾಗೂ ವ್ಯಾಟಿಕನ್‌ ಸಿಟಿ ಒಳಗೊಂಡಿದ್ದವು. ಆಹಾರ, ವಸತಿ ಹಾಗೂ ಸಾರಿಗೆ ವೆಚ್ಚವೂ ಇದರಲ್ಲಿ ಸೇರಿತ್ತು. 

ಕಂಪನಿಯ ಈ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಿದ್ದ ಕೆ.ರುದ್ರಮೂರ್ತಿ ತಮ್ಮ ಕುಟುಂಬದ ಇತರ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಲು ಸಮ್ಮತಿಸಿ ಒಟ್ಟು ₹ 16,37,000 ಮೊತ್ತವನ್ನು ಕಂಪನಿಗೆ ಪಾವತಿ ಮಾಡಿದ್ದರು. ಈ ಪ್ರವಾಸವು 2023ರ ಮೇ 24ರಂದು ಪ್ರಾರಂಭಗೊಂಡು 2023ರ ಜೂನ್‌ 8ಕ್ಕೆ ಮುಕ್ತಾಯಗೊಂಡಿತ್ತು.

‘ನಿಗದಿತ ಸಮಯಕ್ಕೆ ನನ್ನೊಬ್ಬನ ವೀಸಾ ಕೈಸೇರದ ಕಾರಣ 14 ರಾತ್ರಿ ಹಾಗೂ 15 ದಿನಗಳ ನಿಶ್ಚಿತ ಪ್ರವಾಸವು 12 ರಾತ್ರಿ ಹಾಗೂ 13 ದಿನಗಳಿಗೆ ಮೊಟಕುಗೊಂಡಿತ್ತು. ಇದರಿಂದಾಗಿ ನನ್ನ ಲಂಡನ್‌ ವೀಕ್ಷಣೆ ತಪ್ಪಿ ಹೋಯಿತು. ಇದರ ಹೊಣೆಯನ್ನು ಕಂಪನಿಯೇ ಹೊರಬೇಕು’ ಎಂದು ಆರೋಪಿಸಿ ರುದ್ರಮೂರ್ತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ದೂರನ್ನು ಸ್ವೀಕರಿಸಿದ್ದ ಆಯೋಗವು ಎದುರುದಾರರಾದ ಥಾಮಸ್‌ ಕುಕ್‌ (ಇಂಡಿಯಾ) ಕಂಪನಿ ಪ್ರಾದೇಶಿಕ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಿತ್ತು.

ವಿಚಾರಣೆ ವೇಳೆ ದೂರುದಾರರ ಪರ ಹೈಕೋರ್ಟ್‌ ವಕೀಲ ಪ್ರಶಾಂತ್‌ ಟಿ.ಪಂಡಿತ್ ವಾದ ಮಂಡಿಸಿ, ‘ಜಂಟಿ ಪ್ರವಾಸ ಯೋಜನೆ ಕೈಗೊಂಡಾಗ ವೀಸಾ ಹಾಗೂ ಇತರೆ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪ್ರಯಾಣಿಕರಿಗೆ ಕೊಡಿಸುವುದು ಪ್ರವಾಸಿ ಕಂಪನಿಗಳ ಕರ್ತವ್ಯವಾಗಿರುತ್ತದೆ. ದೂರುದಾರರು ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರೂ ವೀಸಾ ಹಾಗೂ ಇತರೆ ದಾಖಲೆಗಳನ್ನು ಕೊಡಿಸದೇ ಇರುವುದು ಸೇವಾ ನ್ಯೂನ್ಯತೆಗೆ ಒಳಪಡುತ್ತದೆ. ಆದ್ದರಿಂದ, ದೂರುದಾರರಿಗೆ ₹ 4 ಲಕ್ಷ ಪರಿಹಾರ, ಮಾನಸಿಕ ಯಾತನೆ ಉಂಟು ಮಾಡಿದ್ದಕ್ಕೆ ₹ 2 ಲಕ್ಷ ಹಾಗೂ ವ್ಯಾಜ್ಯದ ವೆಚ್ಚವಾಗಿ ₹ 50 ಸಾವಿರ ನೀಡಲು ಕಂಪನಿಗೆ ಆದೇಶಿಸಬೇಕು’ ಎಂದು ಕೋರಿದ್ದರು.   

ಇದಕ್ಕೆ ಪ್ರತಿಯಾಗಿ ದೂರುದಾರರ ಆರೋಪಗಳನ್ನು ಅಲ್ಲಗಳೆದಿದ್ದ ಕಂಪನಿ ಪರ ವಕೀಲ ಎಸ್‌.ರಾಮಕೃಷ್ಣನ್‌, ‘ಪ್ರವಾಸದ ನಿರ್ಗಮನ 2023ರ ಮೇ 24ರಂದು ಬೆಳಿಗ್ಗೆ 10.30ಕ್ಕೆ ಆರಂಭಗೊಳ್ಳಬೇಕಿತ್ತು. ಆದರೆ, ದೂರುದಾರರ ವೀಸಾ ಬರುವುದು ವಿಳಂಬವಾದ ಕಾರಣ ಅವರು ಸಕಾಲಕ್ಕೆ ಹೊರಡಲು ಸಾಧ್ಯವಾಗಲಿಲ್ಲ. ರಾಯಭಾರ ಕಚೇರಿಯು 2023ರ ಮೇ 23ರಂದು ಸಂಜೆ ದೂರುದಾರರ ವೀಸಾಕ್ಕೆ ಅನುಮೋದಿಸಿತು. ಅದರಿಂದ ಅವರು ನೇರವಾಗಿ ಪ್ಯಾರಿಸ್‌ ನಗರ ತಲುಪಿದರು. ಅಷ್ಟರಲ್ಲಿ ಲಂಡನ್‌ ನಗರದ ಪ್ರವಾಸ ಭಾಗ ಮುಗಿದಿತ್ತು’ ಎಂದು ಪ್ರತಿಪಾದಿಸಿದ್ದರು. ಇದನ್ನು ಒಪ್ಪದ ವೇದಿಕೆ ಪರಿಹಾರ ನೀಡಿಕೆಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.