ADVERTISEMENT

ನ್ಯಾಯಾಂಗ ನಿಂದನೆ ಆರೋಪ: BBMP ಮುಖ್ಯ ಆಯುಕ್ತ ಗಿರಿನಾಥ್‌ಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 16:26 IST
Last Updated 26 ಅಕ್ಟೋಬರ್ 2023, 16:26 IST
   

ಬೆಂಗಳೂರು: ‘ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ ನೆಲಮಾಳಿಗೆಯಲ್ಲಿ ಅಕ್ರಮವಾಗಿ ನಿರ್ಮಿಸಿದ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ಮೂರು ವರ್ಷಗಳ ಹಿಂದೆ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪಾಲನೆ ಮಾಡಿಲ್ಲ‘ ಎಂಬ ಆರೋಪದ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಈ ಸಂಬಂಧ ವಕೀಲ ಆರ್‌.ಆರ್. ಹಿರೇಮಠ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರಕರಣವೇನು?: ‘ಶಾಪಿಂಗ್‌ ಕಾಂಪ್ಲೆಕ್ಸ್‌ನ ಬ್ಲಾಕ್‌-1ರ ಮರು ನಿರ್ಮಾಣದ ವೇಳೆ ಪಾರ್ಕಿಂಗ್‌ ಜಾಗಕ್ಕಾಗಿ ಮೀಸಲಿದ್ದ ಮೇಲಿನ ನೆಲಮಹಡಿಯಲ್ಲಿ ಮಳಿಗೆಗಳ ಕಾರ್ಯ ನಿರ್ವಹಣೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಿದ್ದ ಬಿಬಿಎಂಪಿ, ಕಾಂಪ್ಲೆಕ್ಸ್‌ನ ಬ್ಲಾಕ್-1ರ ಮರು ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕ ಅನುಮತಿ ಕಲ್ಪಿಸಲಾಗಿದೆ. ಬ್ಲಾಕ್-2, 3 ಮತ್ತು 4 ಅನ್ನು ನಿರ್ಮಿಸಿದ ನಂತರ ಮೇಲಿನ ನೆಲಮಹಡಿ ಜಾಗವನ್ನು ಪಾರ್ಕಿಂಗ್‌ಗೆ ಬಳಸಲಾಗುವುದು‘ ಎಂದು ತಿಳಿಸಿತ್ತು.

ADVERTISEMENT

ಇದನ್ನು ದಾಖಲಿಸಿಕೊಂಡಿದ್ದ ಹೈಕೋರ್ಟ್‌, ‘ಶಾಪಿಂಗ್‌ ಕಾಂಪ್ಲೆಕ್ಸ್‌ ಬ್ಲಾಕ್‌ಗಳ ಮರು ನಿರ್ಮಾಣದ ನಂತರ ಮೇಲಿನ ನೆಲಮಹಡಿಯಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸಬೇಕು‘ ಎಂದು 2020ರಲ್ಲಿ ನಿರ್ದೇಶಿಸಿತ್ತು. ‘ಈ ಆದೇಶ ಹೊರಬಿದ್ದು ಮೂರು ವರ್ಷ ಕಳೆದರೂ ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ‘ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಗಿದೆ. ಅರ್ಜಿದಾರರ ಪರ ವಕೀಲ ಜಿ.ಆರ್‌. ಮೋಹನ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.