ADVERTISEMENT

ಪೊನ್ನಂಪೇಟೆ: ನರಭಕ್ಷಕ ಹುಲಿಯ ಭೀತಿ, ಕಾಫಿ ತೋಟದಲ್ಲಿ ಕೆಲಸ ಸ್ಥಗಿತ

ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು

ಆದಿತ್ಯ ಕೆ.ಎ
Published 10 ಮಾರ್ಚ್ 2021, 20:21 IST
Last Updated 10 ಮಾರ್ಚ್ 2021, 20:21 IST
ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ನಿಯತ್ರಣಕ್ಕೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಹೆದ್ದಾರಿ ತಡೆ ನಡೆಯಿತು
ಕೊಡಗಿನಲ್ಲಿ ವನ್ಯಜೀವಿಗಳ ಹಾವಳಿ ನಿಯತ್ರಣಕ್ಕೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಬುಧವಾರ ಹೆದ್ದಾರಿ ತಡೆ ನಡೆಯಿತು   

ಪೊನ್ನಂಪೇಟೆ (ಕೊಡಗು): ನರಭಕ್ಷಕ ಹುಲಿಯ ಭೀತಿಗೆ ಒಳಗಾಗಿರುವ ಗ್ರಾಮಗಳ ವ್ಯಾಪ್ತಿಯಲ್ಲಿನ ಕಾಫಿ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, 20 ದಿನಗಳಿಂದ ತೋಟದಲ್ಲಿ ಕೆಲಸ ಸ್ಥಗಿತವಾಗಿದೆ.

ಕೊಡಗಿನ ದಕ್ಷಿಣ ಭಾಗದ ಪೊನ್ನಂಪೇಟೆ ತಾಲ್ಲೂಕಿನ 10ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ನರಭಕ್ಷಕ ಹುಲಿ ಸಂಚರಿಸುತ್ತಿದ್ದು, ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. 20 ದಿನಗಳ ಅಂತರದಲ್ಲಿ, ಕಾರ್ಮಿಕರ ಕುಟುಂಬದ ಇಬ್ಬರು ಬಾಲಕರು ಹಾಗೂ ಕಾರ್ಮಿಕ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. 12 ಜಾನುವಾರುಗಳು ಹುಲಿ ದಾಳಿಗೆ ತುತ್ತಾಗಿವೆ. ದುಡಿಯುವ ವರ್ಗ ಆತಂಕದಲ್ಲಿದೆ.

ಕಾಫಿ ಕೊಯ್ಲು ಪೂರ್ಣವಾಗಿದೆ. ಇನ್ನೇನು ಕಾಳುಮೆಣಸು ಕೊಯ್ಲು ಆರಂಭಿಸಬೇಕು ಎನ್ನುವಷ್ಟರಲ್ಲಿ ನರಭಕ್ಷಕ ಹುಲಿಯ ಉಪಟಳ ತೀವ್ರವಾಗಿದೆ. ಯಾರಿಗೂ ತೋಟಗಳತ್ತ ತೆರಳಲು ಸಾಧ್ಯವಾಗುತ್ತಿಲ್ಲ. ಸಕಾಲದಲ್ಲಿ ಕಾಳುಮೆಣಸು ಕೊಯ್ಲು ಮಾಡದಿದ್ದರೆ, ಫಸಲು ನೆಲಕ್ಕೆ ಉದುರುವ ಆತಂಕ ಎದುರಾಗಿದೆ.

ADVERTISEMENT

‘ಮರ ಕಸಿ, ಕಾಫಿ ಗಿಡಗಳ ಕಪಾತು ಕೆಲಸವನ್ನೂ ಮಳೆ ಆರಂಭವಾಗುವ ಮೊದಲೇ ಮುಗಿಸಿಕೊಳ್ಳಬೇಕು. ಕಾರ್ಮಿಕರ ಕೊರತೆಯ ನಡುವೆಯೂ ಹೇಗೋ ಕೆಲಸ ನಡೆಯುತ್ತಿತ್ತು; ಈಗ ಉಳಿದ ಕಾರ್ಮಿಕರೂ ಆತಂಕದಲ್ಲಿದ್ದಾರೆ’ ಎಂದು ಬೆಳೆಗಾರರು ನೋವು ತೋಡಿಕೊಂಡರು.

‘ಕಾಡಾನೆ ಹಾವಳಿಯಿಂದ ಬೇಸತ್ತಿದ್ದೆವು. ಈಗ ಹುಲಿ ಕಾಟ ಶುರುವಾಗಿದೆ. ಜಿಲ್ಲೆಯಲ್ಲಿ ಕೃಷಿ ಮಾಡುವುದೇ ಬೇಡ ಎನ್ನುವಂತಾಗಿದೆ. ಸಂಜೆಯಾದ ಮೇಲೆ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಬೈಕ್‌ನಲ್ಲಿ ಹೋಗಲು ಭಯ. ಕಾರು, ಜೀಪು ಉಳ್ಳವರು ಮಾತ್ರ ಪಟ್ಟಣಕ್ಕೆ ಹೋಗಿ ಸಾಮಗ್ರಿ ಖರೀದಿಸಿ ಮನೆಗೆ ತರುತ್ತಿದ್ದಾರೆ. ಕಾರ್ಮಿಕರ ಸಂಕಷ್ಟ ಮಾತ್ರ ಹೇಳತೀರದಾಗಿದೆ. ಈ ಆತಂಕದ ನಡುವೆ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳುವುದಾದರೂ ಹೇಗೆ?’ ಎಂದು ತೆರಾಲು ಗ್ರಾಮದ ಕೆ.ಹರೀಶ್ ಅಳಲು ತೋಡಿಕೊಂಡರು.

‘ಒಂದಲ್ಲ, ಐದು ಹುಲಿ’: ‘ಈ ಭಾಗದಲ್ಲಿ ಒಂದಲ್ಲ, ಐದು ಹುಲಿಗಳು ಸಂಚರಿಸುತ್ತಿವೆ’ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ‘ಒಂದು ದಿನ ಮಂಚಳ್ಳಿಯಲ್ಲಿ ಹುಲಿ ದಾಳಿ ನಡೆದರೆ, ಮರು ದಿವಸ ಅಲ್ಲಿಂದ 10ರಿಂದ 20 ಕಿ.ಮೀ ದೂರದ ಸ್ಥಳದಲ್ಲಿ ದಾಳಿ ನಡೆಯುತ್ತಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಾರ್ಯಾಚರಣೆ ಇನ್ನಷ್ಟು ಚುರುಕಾಗಬೇಕು. ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕು’ ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಜಾನುವಾರು ಮಾರಾಟಕ್ಕೆ ನಿರ್ಧಾರ: ದಕ್ಷಿಣ ಕೊಡಗಿನ ಗ್ರಾಮಗಳ ಕೃಷಿಕರು, ಹಸು ಸಾಕಿ ಹೈನುಗಾರಿಕೆಯಿಂದ ಆದಾಯ ಗಳಿಸುತ್ತಿದ್ದರು. ಈಗ ಮೇಯಲು ಬಿಟ್ಟಿರುವ ಜಾನುವಾರು ಮೇಲೆ ಹುಲಿ ದಾಳಿ ನಡೆಸುತ್ತಿದ್ದು, ಕಳೆದ ಕೆಲವು ತಿಂಗಳಿಂದ ದಕ್ಷಿಣದ ಬಿರುನಾಣಿಯಿಂದ ಉತ್ತರದ ಮಾಲ್ದಾರೆಯ ಅರಣ್ಯದ ಅಂಚಿನ ಗ್ರಾಮಗಳಲ್ಲಿ ನೂರಾರು ಜಾನುವಾರು ಬಲಿಯಾಗಿವೆ. ಉಳುಮೆ, ಹಾಲಿಗಾಗಿ ಸಾಕಿದ್ದ ಜಾನುವಾರು ಕಳೆದುಕೊಂಡಿರುವ ರೈತರು ಅವುಗಳನ್ನು ಸಾಕುವುದನ್ನೇ ಬಿಟ್ಟಿದ್ದಾರೆ.

‘ಒಂದೂವರೆ ತಿಂಗಳಿಂದ ಹುಲಿ ದಾಳಿಯು ನಿರಂತರವಾಗಿದ್ದು, ಉಳಿದಿರುವ ಜಾನುವಾರುಗಳ ಮಾರಾಟಕ್ಕೂ ಕೃಷಿಕರು ನಿರ್ಧರಿಸಿದ್ದಾರೆ. ಆದರೆ, ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾದ ಮೇಲೆ ಜಾನುವಾರು ಖರೀದಿಗೂ ಯಾರೂ ಬರುತ್ತಿಲ್ಲ. ಇದು ಮತ್ತೊಂದು ರೀತಿಯ ಸಂಕಷ್ಟ ತಂದಿದೆ’ ಎಂದು ಕೃಷಿಕ ಮಂದಯ್ಯ ಅವರು ಹೇಳಿದರು.

ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ; ಹೆದ್ದಾರಿ ತಡೆ
ಹುಲಿ ಸೆರೆ ಕಾರ್ಯಾಚರಣೆ ವಿಳಂಬವಾಗುತ್ತಿದ್ದು, ಜಿಲ್ಲೆಯಲ್ಲಿ ಜನಾಕ್ರೋಶ ಹೆಚ್ಚಾಗಿದೆ. ಬೆಳ್ಳೂರು ಗ್ರಾಮದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿದೆ. ಬುಧವಾರ ರೈತ ಸಂಘದ ನೇತೃತ್ವದಲ್ಲಿ ಬೃಹತ್‌ ವಾಹನ ಜಾಥಾ ನಡೆಯಿತು.

ಕಾನೂರು ವೃತ್ತದಿಂದ ಜಾಥಾ ಆರಂಭಗೊಂಡು, ಮತ್ತಿಗೋಡು ವನ್ಯಜೀವಿ ವಲಯ ಅರಣ್ಯ ಕಚೇರಿ ತಲುಪಿತು. ಬೆಳೆಗಾರರು, ಕಾರ್ಮಿಕರು, ರೈತ ಸಂಘದ ಮುಖಂಡರು, ವಲಯ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ, ಆಕ್ರೋಶ ಹೊರಹಾಕಿದರು. ಹೆದ್ದಾರಿ ತಡೆ ನಡೆಸಿದರು.

*
ಹುಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಬೆಳೆಗಾರರಿಗೆ ಕೋವಿ ಬಳಸಲು ಸರ್ಕಾರ ಅವಕಾಶ ನೀಡಬೇಕು. ಇಲ್ಲದಿದ್ದರೆ ಜನರೇ ಬಂದೂಕು ಕೈಗೆತ್ತಿಕೊಳ್ಳಲಿದ್ದಾರೆ.
-ಪವನ್‌ ಪೆಮ್ಮಯ್ಯ, ಅಧ್ಯಕ್ಷ, ಕೊಡಗು ರಕ್ಷಣಾ ವೇದಿಕೆ

*
ಕೂಲಿ ಮಾಡಲೆಂದು ಕೊಡಗಿಗೆ ಬಂದಿದ್ದೆವು. ಕೆಲಸಕ್ಕೆ ಹೋದರೆ, ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿಯಿದೆ. ಹಾಗೇನಾದರೂ ಆದರೆ, ಹೆಂಡತಿ– ಮಕ್ಕಳ ಗತಿ ಏನು?
-ಅಪ್ಪು, ತೋಟದ ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.