ADVERTISEMENT

ಬಿಎಸ್ಸಿ: 14 ಚಿನ್ನದ ಪದಕಗಳ ಬೆಳೆ ತೆಗೆದ ಪ್ರಶಾಂತ್

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ: ಪೃಥ್ವಿ, ವೀಣಾಗೆ ತಲಾ ನಾಲ್ಕು ಚಿನ್ನ

ವೆಂಕಟೇಶ ಜಿ.ಎಚ್.
Published 6 ಏಪ್ರಿಲ್ 2021, 20:20 IST
Last Updated 6 ಏಪ್ರಿಲ್ 2021, 20:20 IST
ವಿ. ಪ್ರಶಾಂತ್ ಪದಕಗಳ ಗುಚ್ಛ ಪ್ರದರ್ಶಿಸಿದರು. ಅಮ್ಮ ವಸಂತಾ ಹಾಗೂ ಅಜ್ಜ ಚೆನ್ನೇಗೌಡ ಇದ್ದಾರೆ. -ಪ್ರಜಾವಾಣಿ ಚಿತ್ರ/ ಸಿದ್ದು ಗೌಡರ
ವಿ. ಪ್ರಶಾಂತ್ ಪದಕಗಳ ಗುಚ್ಛ ಪ್ರದರ್ಶಿಸಿದರು. ಅಮ್ಮ ವಸಂತಾ ಹಾಗೂ ಅಜ್ಜ ಚೆನ್ನೇಗೌಡ ಇದ್ದಾರೆ. -ಪ್ರಜಾವಾಣಿ ಚಿತ್ರ/ ಸಿದ್ದು ಗೌಡರ   

ಬಾಗಲಕೋಟೆ: ‘ಬಿಎಸ್ಸಿ ಓದಲು ನಮ್ಮೂರ ಸಮೀಪದ ಟಿ.ಬೇಕುಪ್ಪೆಯ ಯೂನಿಯನ್ ಬ್ಯಾಂಕ್‌ನಲ್ಲಿ ₹2.40 ಲಕ್ಷ ಶಿಕ್ಷಣ ಸಾಲ ಸಿಕ್ಕಿತ್ತು. ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿಗೆ ಸೀಟ್ ಸಿಕ್ಕಿದೆ. ಮತ್ತೆ ಸಾಲಕ್ಕೆ ಅರ್ಜಿ ಹಾಕಿದ್ದೇನೆ. ಈ ಚಿನ್ನದ ಪದಕಗಳು ಮುಂದಿನ ಓದಿಗೆ ಸಾಲ ಸಿಗುವ ವಿಶ್ವಾಸ ಹೆಚ್ಚಿಸಿವೆ’ ಎಂದು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕುನೂರಿನ ವಿ.ಪ್ರಶಾಂತ್ ಹೇಳಿದಾಗ, ಪಕ್ಕದಲ್ಲಿಯೇ ನಿಂತಿದ್ದ ಅಮ್ಮ ವಸಂತಾ ಮೆಚ್ಚುಗೆಯಿಂದ ಮಗನ ಗಲ್ಲ ಹಿಂಡಿದರು.

ಮಂಗಳವಾರ ಇಲ್ಲಿ ನಡೆದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಪ್ರಶಾಂತ್, ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ 14 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

‘ಪ್ರಶಾಂತ್ ಇಲ್ಲಿಯವರೆಗೂ ಊರಲ್ಲಿರುವ ಎರಡೂವರೆ ಎಕರೆ ಹೊಲದಲ್ಲಿ ಅಪ್ಪನೊಂದಿಗೆ ಸೇರಿ ರೇಷ್ಮೆ ಬೆಳೆಯುತ್ತಿದ್ದ. ಈಗ ಇಲ್ಲಿ (ಬಾಗಲಕೋಟೆಯಲ್ಲಿ) ಬಂದು ಚಿನ್ನದ ಫಸಲನ್ನೇ ತೆಗೆದಿದ್ದಾನೆ’ ಎಂದು ಘಟಿಕೋತ್ಸವಕ್ಕೆ ಕುನೂರಿನಿಂದ ಬಂದಿದ್ದ ಅಜ್ಜ ಚೆನ್ನೇಗೌಡರು ಖುಷಿಪಟ್ಟರು.

ADVERTISEMENT

‘ಬಾಲ್ಯದಿಂದಲೂ ನನಗೆ ಕೃಷಿ ಖುಷಿ ನೀಡುವ ಸಂಗತಿ. ಹೀಗಾಗಿಯೇ ಪಿಯುಸಿಯಲ್ಲಿ ಶೇ 93.87 ಅಂಕ ಬಂದಿದ್ದರೂ ಎಂಜಿನಿಯರಿಂಗ್ ಅಥವಾ ಬೇರೆ ಯಾವುದೇ ವಿಷಯ ಆಯ್ದುಕೊಳ್ಳಲಿಲ್ಲ. ಗಿಡ–ಮರಗಳ ಜೊತೆಗೆ ಬದುಕಿ–ಬೆಳೆಯುವ ಆ ಅನುಭೂತಿಯೇ ಬೇರೆ’ ಎಂದು ಪ್ರಶಾಂತ್ ಹೇಳಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿಯ ಪುಷ್ಪಾ ಎಚ್.ಎ ಅವರು ಬಿಎಸ್ಸಿ ತೋಟಗಾರಿಕೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದರು.

ಐಎಎಸ್ ಅಧಿಕಾರಿಯಾಗುವೆ: ಎಂಎಸ್ಸಿ ತರಕಾರಿ ವಿಜ್ಞಾನ ಹಾಗೂ ಹಣ್ಣು ವಿಜ್ಞಾನ ವಿಷಯಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆಯ ಪೃಥ್ವಿ ಬಸವರಾಜ್ ಹಾಗೂ ಕೊಡಗು ಜಿಲ್ಲೆ ಕುಶಾಲನಗರ ಬಳಿಯ ದಂಡಿನ ಪೇಟೆಯ ವೀಣಾ ಸಿ.ಡಿ ತಲಾ ನಾಲ್ಕು ಚಿನ್ನದ ಪದಕಗಳನ್ನು ಪಡೆದರು.

ಜಂಗಮಕೋಟೆಯಲ್ಲಿ ಎರಡು ಎಕರೆ ಒಣಭೂಮಿಯೇ ಪೃಥ್ವಿ ಅವರ ಕುಟುಂಬಕ್ಕೆ ಆಸರೆ. ‘ನಮ್ಮೂರಲ್ಲಿ ಸಾವಿರ ಅಡಿ ಆಳ ಕೊರೆಸಿದರೂ ನೀರಿನ ಪಸೆ ಸಿಗುವುದಿಲ್ಲ. ಇರುವ ತುಂಡು ಭೂಮಿ, ಬರವನ್ನೇ ಹಾಸಿ ಹೊದ್ದವರು ನಾವು. ಹೀಗಾಗಿ ನೀರಿನ ಅಲಭ್ಯತೆಯನ್ನೇ ಸವಾಲಾಗಿ ಸ್ವೀಕರಿಸಿ ಬೆಳೆ ತೆಗೆಯುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವೆ. ಮುಂದೆ ಐಎಎಸ್ ಅಧಿಕಾರಿಯಾಗುವ ಆಸೆಯಿದೆ’ ಎಂದು ಪೃಥ್ವಿ ಹೇಳಿದರು.

‘ಮಗಳು ಬಟರ್‌ಫ್ರೂಟ್‌ ಮೇಲೆ ಸಂಶೋಧನೆ ಕೈಗೊಂಡಿದ್ದಾಳೆ. ಅವಳು ಇಡೀ ದೇಶಕ್ಕೆ ನೆರವಾಗುವಂತಹ ಸಾಧನೆ ಮಾಡಲಿ’ ಎಂದು ದಂಡಿನಪೇಟೆಯ ವೀಣಾ ಅವರ ತಾಯಿಆಶಾರಾಣಿ ಸಂತಸ ಹಂಚಿಕೊಂಡರು.ಆಶಾರಾಣಿ ಕಂದಾಯ ಇಲಾಖೆಯ ನಿವೃತ್ತ ಸಿಬ್ಬಂದಿ.

ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ತೋಟಗಾರಿಕೆ ಸಚಿವ ಆರ್.ಶಂಕರ್ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ.ಕೆ.ಎಂ.ಇಂದಿರೇಶ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.