ADVERTISEMENT

ಎನ್‌ಜಿಒಗಳ ಜತೆ ಸಮನ್ವಯ ಅಗತ್ಯ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:24 IST
Last Updated 15 ಏಪ್ರಿಲ್ 2020, 14:24 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: "ಲಾಕ್ ಡೌನ್ ಅವಧಿಯಲ್ಲಿ ಭಿಕ್ಷಕರು, ನಿರ್ಗತಿಕರು ಮತ್ತು ನಿರಾಶ್ರಿತರಿಗೆ ಆಹಾರ ವಿತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆ ಮತ್ತು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸರ್ಕಾರದ ಸಮನ್ವಯ ಹಾಗೂ ಸಹಕಾರದ ಅಗತ್ಯ ಇದೆ" ಎಂದು ಹೈಕೋರ್ಟ್ ಹೇಳಿದೆ.

"ನೆರವಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆ (ಎನ್ ಜಿ ಒ) ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ವಿವರಣೆ ನೀಡಿ" ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಕಲಬುರ್ಗಿ ಜಿಲ್ಲಾ ಆಡಳಿತ ಮಾರ್ಚ್ 30ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ "ನೊ ಯುವರ್ ರೈಟ್ಸ್ ಅಸೋಸಿಯೇಷನ್" ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ADVERTISEMENT

"ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆ ಕುರಿತು ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಸರ್ಕಾರವು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸಹಕಾರ ಪಡೆಯಬೇಕು. ಸಭೆಗೆ ಸ್ಥಳೀಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಕಾರ್ಯದರ್ಶಿಗಳನ್ನೂ ಆಹ್ವಾನಿಸಬೇಕು" ಎಂದು
ಸಲಹೆ ಮಾಡಿದೆ.

"ವಿವಿಧ ಸಂಘಟನೆಗಳ ಸದಸ್ಯರು ಭಿಕ್ಷುಕರು, ನಿರ್ಗತಿಕರು ಮತ್ತು ನಿರಾಶ್ರಿತರಿಗೆ ಆಹಾರ ಒದಗಿಸುವುದು ನಿಷೇಧಾಜ್ಞೆಯ ಸ್ಪಷ್ಟ ಉಲ್ಲಂಘನೆ ಆಗಲಿದೆ" ಎಂದು ಕಲಬುರ್ಗಿ ಜಿಲ್ಲಾಡಳಿತದ ಆದೇಶದಲ್ಲಿ ತಿಳಿಸಲಾಗಿದೆ.

"ಈ ಆದೇಶ ಮಾರ್ಪಾಡು ಮಾಡಲು ಕಲಬುರ್ಗಿ ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು" ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.