ADVERTISEMENT

ವೃದ್ಧರಿಂದ ₹2 ಲಕ್ಷ ವಸೂಲಿ !

ಒಂದು ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್, ಮತ್ತೊಂದರಲ್ಲಿ ನೆಗಟಿವ್ !

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರಿಗೆ ಒಂದು ವಾರ ಚಿಕಿತ್ಸೆ ನೀಡಿದ ವೈದ್ಯರು, ₹2ಲಕ್ಷ ಬಿಲ್‌ ಕೊಟ್ಟಿದ್ದಾರೆ. ಕೊನೆಗೆ, ಕೊರೊನಾ ಪಾಸಿಟಿವ್‌ ಇದೆ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿ ಎಂದು ಕೈತೊಳೆದುಕೊಂಡಿದ್ದಾರೆ. ಬೇರೆಕಡೆ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ನೆಗೆಟಿವ್‌ ವರದಿ ಬಂದಿದೆ !

‘ನಮ್ಮ ತಂದೆ ಕಾಂತರಾಜು (70) ಅವರನ್ನು ನಾಗರಭಾವಿ ಮುಖ್ಯರಸ್ತೆಯ ವಿನಾಯಕ ಲೇಔಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕಳೆದ ಭಾನುವಾರ ದಾಖಲಿಸಿದ್ದೆವು. ಉಸಿರಾಟದ ತೊಂದರೆ ಇದೆ ಎಂದು ಹೇಳಿ ಚಿಕಿತ್ಸೆ ಆರಂಭಿಸಿದರು. ನಮಗೆ ಒಳಗೆ ಬಿಡಲೇ ಇಲ್ಲ’ ಎಂದು ಪುತ್ರ ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಪರೀಕ್ಷೆ ಮಾಡಬೇಕು ಎಂದು ₹5 ಸಾವಿರ ಕಟ್ಟಿಸಿಕೊಂಡರು. ನಂತರ, ನಿಮ್ಮ ತಂದೆಗೆ ಪಾಸಿಟಿವ್‌ ಇದೆ. ಕೋವಿಡ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಈ ವೇಳೆಗಾಗಲೇ ₹2 ಲಕ್ಷ ಬಿಲ್‌ ಆಗಿತ್ತು.ಬಿಬಿಎಂಪಿ ಅಧಿಕಾರಿಗಳು ನಮ್ಮ ಮನೆಯನ್ನೂ ಸೀಲ್‌ಡೌನ್ ಮಾಡಿದ್ದರು’ ಎಂದು ಅವರು ಹೇಳಿದರು.

ADVERTISEMENT

‘ರಾಜರಾಜೇಶ್ವರಿ ನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದೆವು. ಪರೀಕ್ಷೆ ನಡೆಸಿದ ವೈದ್ಯರು, ನಿಮ್ಮ ತಂದೆಗೆ ಇಲ್ಲ. ಮನೆಗೆ ಕರೆದುಕೊಂಡು ಹೋಗಿ ಎಂದರು. ಈಗಲೂ ಅವರಿಗೆ ಜ್ವರ ಅಥವಾ ಉಸಿರಾಟದ ಸಮಸ್ಯೆ ಇಲ್ಲ’ ಎಂದು ಲೋಕೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.