ADVERTISEMENT

ಬಳ್ಳಾರಿ: ಜಿಂದಾಲ್ ಸಂಸ್ಥೆಯ ಉದ್ಯೋಗಿಗಳು ಸೇರಿ 74 ಮಂದಿಗೆ ಸೋಂಕು

ಜಿಂದಾಲ್‍: 101 ಮುಟ್ಟಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 12:31 IST
Last Updated 11 ಜೂನ್ 2020, 12:31 IST
ತೋರಣಗಲ್ಲು ಗ್ರಾಮದ ಮೂರನೇ ವಾರ್ಡ್‍ನ್ನು ಸಂಪೂರ್ಣವಾಗಿ ಗುರುವಾರ ಸೀಲ್‍ಡೌನ್ ಮಾಡಲಾಗಿದೆ.
ತೋರಣಗಲ್ಲು ಗ್ರಾಮದ ಮೂರನೇ ವಾರ್ಡ್‍ನ್ನು ಸಂಪೂರ್ಣವಾಗಿ ಗುರುವಾರ ಸೀಲ್‍ಡೌನ್ ಮಾಡಲಾಗಿದೆ.   

ತೋರಣಗಲ್ಲು: ಕೊರೊನಾ ಸೋಂಕಿತ ಜಿಂದಾಲ್ ಸಂಸ್ಥೆಯ ಸಿಎಂಡಿ ಮತ್ತು ಕೊರೆಕ್ಸ್ ವಿಭಾಗದ ನೌಕರರೊಂದಿಗೆ ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ ಇಬ್ಬರು ಮಕ್ಕಳು, ಎಂಟು ಗೃಹಿಣಿಯರು ಸೇರಿ ಒಟ್ಟು 74 ಮಂದಿಗೆ ಗುರುವಾರ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೂ ಜಿಂದಾಲ್‌ನ 101 ಮಂದಿಗೆ ಸೋಂಕು ದೃಢಪಟ್ಟಿದೆ.

ಒಂಭತ್ತು ದಿನಗಳಲ್ಲಿ ಜಿಂದಾಲ್‍ನ ವಿದ್ಯಾನಗರ, ವಿ.ವಿ.ನಗರ, ಶಂಕರಗುಡ್ಡ ಕಾಲೋನಿ, ಹಿಲ್ ಸೈಡ್ ಟೌನ್, ತೋರಣಗಲ್ಲು ಗ್ರಾಮ, ತೋರಣಗಲ್ಲು ರೈಲ್ವೆನಿಲ್ದಾಣ, ತಾರಾನಗರ, ತಾಳೂರು, ವಡ್ಡು ಮತ್ತು ಬಸಾಪುರ ನಿವಾಸಿಗಳಿಗೆ ಸೋಂಕು ತಗುಲಿರುವುದರಿಂದ ಈ ಪ್ರದೇಶಗಳ ನಿವಾಸಿಗಳು ದಿನ ದಿನಕ್ಕೆ ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ.

ತಾಳೂರು ಗ್ರಾಮದಲ್ಲಿ ನಾಲ್ಕು ಪ್ರದೇಶ, ವಡ್ಡು ಗ್ರಾಮದಲ್ಲಿ ಮೂರು ಪ್ರದೇಶ, ತೋರಣಗಲ್ಲು ಗ್ರಾಮ ಮತ್ತು ರೈಲ್ವೆ ನಿಲ್ದಾಣ ಸೇರಿ ಮೂರು ಪ್ರದೇಶಗಳು, ಶಂಕರಗುಡ್ಡ ಕಾಲೋನಿಯಲ್ಲಿ ಐದು ಪ್ರದೇಶಗಳು, ವಿದ್ಯಾನಗರದಲ್ಲಿ ಮೂರು ಪ್ರದೇಶಗಳು, ಹಿಲ್ ಸೈಡ್ ಟೌನ್ ನಲ್ಲಿ ಎರಡು ಪ್ರದೇಶಗಳು ಸೇರಿದಂತೆ ಒಟ್ಟು 20 ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ನಿತ್ಯ ಆರೋಗ್ಯ ತಪಾಸಣೆ, ಮನೆ ಸಮೀಕ್ಷೆಯನ್ನು ಆರೋಗ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ನಡೆಸುತ್ತಿದ್ದಾರೆ.

ADVERTISEMENT

‘ಬುಧವಾರ ರಾತ್ರಿ 34 ಮತ್ತು ಗುರುವಾರ ಬೆಳಿಗ್ಗೆ 40 ಜಿಂದಾಲ್ ನೌಕರರಿಗೆ ಸೋಂಕು ದೃಢಪಟ್ಟಿದೆ. 74 ಮಂದಿಯ ಪ್ರಾಥಮಿಕ ಸಂಪರ್ಕ ಹೊಂದಿದ 103 ಮಂದಿಯನ್ನು ಒಪಿಜೆ ಮತ್ತು ರಾಕ್ ರೀಜೆನ್ಸಿ ಹೋಟೆಲ್‍ನ ಸಾಂಸ್ಥಿಕ ಕ್ವಾರಂಟೈನ್‍ಗಳಿಗೆ ಒಳಪಡಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧ್ಯಾಧಿಕಾರಿ ಡಾ.ಗೋಪಾಲ್‍ರಾವ್ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.