ADVERTISEMENT

ಶೀತ, ಜ್ವರದಿಂದ ಬಳುತ್ತಿರುವ ಶಾಲಾ ಮಕ್ಕಳಿಗೆ ರಜೆ ನೀಡಿ: ಸರ್ಕಾರ ಸೂಚನೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 6:22 IST
Last Updated 3 ಮಾರ್ಚ್ 2020, 6:22 IST
   

ಬೆಂಗಳೂರು: ಶೀತ, ಕೆಮ್ಮು, ಕಫ ಮತ್ತು ಜ್ವರದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ರಜೆ ನೀಡುವಂತೆ ಶಾಲೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಕೋವಿಡ್‌–19 (ಕೊರೊನಾ ವೈರಸ್)ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿಮುನ್ನೆಚ್ಚರಿಕೆಯಾಗಿ ಈ ಸೂಚನೆ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

‘ವಿದ್ಯಾರ್ಥಿ, ಸಿಬ್ಬಂದಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅವರಿಗೆ ರಜೆ ಮಂಜೂರು ಮಾಡಬೇಕು. ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ದೃಢೀಕರಿಸಿದ ಬಳಿಕವಷ್ಟೇ ಅವರು ಮರಳಿ ಶಾಲೆಗೆ ಬರಲು ಅನುಮತಿ ನೀಡಬೇಕು. ವಸತಿನಿಲಯಗಳಲ್ಲಿರುವ ವಿದ್ಯಾರ್ಥಿ ಅಥವಾ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಲ್ಲಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು’ ಎಂದು ಇಲಾಖೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.

ವಿದ್ಯಾರ್ಥಿ ಅಥವಾ ಸಿಬ್ಬಂದಿ ಪೈಕಿ ಇತ್ತೀಚೆಗೆ ಚೀನಾದಿಂದ ಬಂದವರು ಯಾರಾದರೂ ಇದ್ದಲ್ಲಿ ಅವರನ್ನು ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಹೈದರಾಬಾದ್‌ ಮೂಲದ ಟೆಕಿಯೊಬ್ಬರಲ್ಲಿ ಕೊರೊನಾ ವೈರಸ್‌ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ದುಬೈನಿಂದ ವಾಪಸಾದ ಎಂಜಿನಿಯರ್ ಒಬ್ಬರು ಎರಡು ದಿನ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅದಾದ ಬಳಿಕ, 10 ದಿನಗಳ ಹಿಂದೆ ಕುಟುಂಬದ ಭೇಟಿಗಾಗಿ ಹೈದರಾಬಾದ್‌ಗೆ ತೆರಳಿದಾಗ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.