ADVERTISEMENT

ಸಿರುಗುಪ್ಪದ ಯುವತಿಗೆ ಕೋವಿಡ್‌ ದೃಢ: ಬಳ್ಳಾರಿಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2020, 6:11 IST
Last Updated 13 ಮೇ 2020, 6:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ: ಸಿರುಗುಪ್ಪ ತಾಲ್ಲೂಕಿನ ಗೋಸಬಾಳ ಗ್ರಾಮದ 18 ವರ್ಷದ ಯುವತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿ ಮೂರು ದಿನಗಳ ಹಿಂದೆ ಬಳ್ಳಾರಿಯ ವಿಮ್ಸ್‌ಗೆ ದಾಖಲಾಗಿದ್ದರು. ಮುಂಜಾಗರೂಕತಾ ಕ್ರಮವಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ರಾತ್ರಿಯೇ ಅವರ ವೈದ್ಯಕೀಯ ವರದಿ ಬಂದಿದ್ದು, ಕೋವಿಡ್‌–19 ಇರುವುದು ದೃಢಪಟ್ಟಿದೆ. ಯುವತಿಯನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಇದನ್ನು ಜಿಲ್ಲಾಧಿಕಾರಿ ಎಸ್‌.ಎಸ್. ನಕುಲ್‌ ದೃಢಪಡಿಸಿದ್ದಾರೆ.

ಯುವತಿ ಆಂಧ್ರ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಹೊಳಲಗುಂದಿ ಗ್ರಾಮದ ಸಹೋದರನ ಮನೆಗೆ ಹೋಗಿ ಬಂದಿದ್ದರು ಎಂದು ಗೊತ್ತಾಗಿದೆ. ಯುವತಿ ವಿಮ್ಸ್‌ನಲ್ಲಿ ಓಡಾಡಿದ್ದು, ಆಸ್ಪತ್ರೆಯ ಸಿಸಿಟಿವಿದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ 25ಕ್ಕೂ ಅಧಿಕ ಸಿಬ್ಬಂದಿಗೆ ಕ್ವಾರಂಟೈನ್‌ ಮಾಡಲಾಗಿದೆ.

ADVERTISEMENT

ಒಟ್ಟು 17 ಜನ ಸೋಂಕಿತರಲ್ಲಿ ಈಗಾಗಲೇ 12 ಜನ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಬಳ್ಳಾರಿ, ಹೊಸಪೇಟೆ, ಸಂಡೂರಿನ ಕೃಷ್ಣಾನಗರ, ಕಂಪ್ಲಿ ಹಾಗೂ ಸಿರುಗುಪ್ಪದ ಯುವತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.