ADVERTISEMENT

ಕೋವಿಡ್‌–19 | ‘ಆಸ್ಪತ್ರೆ ಸಿಬ್ಬಂದಿಯ ಪ್ರೀತಿಯಿಂದ ಕೋವಿಡ್‌ ಗೆದ್ದೆ’

ಆತ್ಮವಿಶ್ವಾಸದಿಂದ ವೈದ್ಯರನ್ನು ನಂಬಿ: ಗುಣಮುಖರಾಗಿ ಮನೆಗೆ ಬಂದ 185ನೇ ರೋಗಿಯ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 21:19 IST
Last Updated 28 ಏಪ್ರಿಲ್ 2020, 21:19 IST
ಗುಣಮುಖರಾಗಿ ಸ್ವರ್ಣಸಂದ್ರದ ತಮ್ಮ ಮನೆಗೆ ಬಂದ ವಿನಯ್‌ ಅವರನ್ನು, ಕುಟುಂಬದ ಸದಸ್ಯರು ಆರತಿ ಬೆಳಗಿ ಬರಮಾಡಿಕೊಂಡರು
ಗುಣಮುಖರಾಗಿ ಸ್ವರ್ಣಸಂದ್ರದ ತಮ್ಮ ಮನೆಗೆ ಬಂದ ವಿನಯ್‌ ಅವರನ್ನು, ಕುಟುಂಬದ ಸದಸ್ಯರು ಆರತಿ ಬೆಳಗಿ ಬರಮಾಡಿಕೊಂಡರು   

ಮಂಡ್ಯ: ಕೋವಿಡ್‌–19ನಿಂದ ಗುಣಮುಖರಾದ ಮಂಡ್ಯದ ಸ್ವರ್ಣಸಂದ್ರದ ನಿವಾಸಿ ವಿನಯ್ ಮಂಗಳವಾರ ಮನೆಗೆ ಮರಳಿದರು. ಬಡಾವಣೆಯ ಜನರು ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದರೆ, ಮನೆಯವರು ಆರತಿ ಬೆಳಗಿ ಬರಮಾಡಿಕೊಂಡರು. ಸೋಂಕಿನ ಸವಾಲು ಗೆದ್ದ ಇವರಿಗೆ ಅಕ್ಷರಶಃ ಯುದ್ಧ ಗೆದ್ದು ಬಂದ ಸಂಭ್ರಮ.

ಅದೇ ಸಂಭ್ರಮದಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಮೂಲಕ ಮತ್ತಿಬ್ಬರನ್ನು ಗುಣಪಡಿಸಲು ಅನುಕೂಲವಾಗುವಂತೆ ಅವರು ತಮ್ಮ ರಕ್ತವನ್ನು ದಾನ ಮಾಡಿದ್ದಾರೆ.

ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಸೂಕ್ಷ್ಮಜೀವ ವಿಜ್ಞಾನಿಯಾಗಿರುವ ವಿನಯ್, ಸರ್ಕಾರಿ ಆಸ್ಪತ್ರೆಯಲ್ಲಿನ ಸೌಕರ್ಯ ಮತ್ತು ಸಿಬ್ಬಂದಿ ಕಾರ್ಯವೈಖರಿಯನ್ನು ತುಂಬು ಹೃದಯದಿಂದ ಹೊಗಳಿದ್ದಾರೆ. ಆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ADVERTISEMENT

185ನೇ ರೋಗಿಯಾಗಿದ್ದ ಇವರು, ‘ಗುಣಮಟ್ಟದ ಚಿಕಿತ್ಸೆಯ ಜೊತೆಗೆ ಕೋವಿಡ್‌ ಆಸ್ಪತ್ರೆಯಲ್ಲಿ ಸಿಕ್ಕ ಸಕಲ ಸೌಲಭ್ಯ ಹಾಗೂ ಸಿಬ್ಬಂದಿ ಪ್ರೀತಿಯಿಂದ ಕೋವಿಡ್‌ –19 ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟೊಂದು ಸೌಲಭ್ಯವಿದೆ ಎಂದು ಎಣಿಸಿರಲಿಲ್ಲ. ವೈದ್ಯರು ನಿತ್ಯ ಆತ್ಮವಿಶ್ವಾಸ ತುಂಬುತ್ತಿದ್ದರು. ಮನೋವೈದ್ಯರು ಕೌನ್ಸೆಲಿಂಗ್ ನಡೆಸುತ್ತಿದ್ದರು. ಸಕಾಲಕ್ಕೆ ಆಹಾರ ಒದಗಿಸುತ್ತಾ, ಮನೆಯ ವಾತಾವರಣವನ್ನೇ ಕಲ್ಪಿಸಿದ್ದರು’ ಎಂದು ತಿಳಿಸಿದರು.

‘ಮೈಕ್ರೊಬಯಾಲಜಿಸ್ಟ್‌ ಆಗಿರುವುದರಿಂದ ವೈರಾಣುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಹೀಗಾಗಿ ಚಿಕಿತ್ಸೆ ಏನಿರಬಹುದು ಎಂಬ ಬಗ್ಗೆ ಆತಂಕವಿತ್ತು. ದೇಹದಲ್ಲಿ ರೋಗನಿರೋಧಕಶಕ್ತಿ ವೃದ್ಧಿಸುವ ಔಷಧಿಗಳನ್ನಷ್ಟೇ ವೈದ್ಯರು ನೀಡಿದರು. ಹೀಗಾಗಿ ಆರೋಗ್ಯವಾಗಿ ಮನೆಗೆ ಬಂದಿದ್ದೇನೆ’ ಎಂದರು.

‘ಕೋವಿಡ್‌ 19 ರೋಗಿಗಳು ಭಯಪಡುವ ಅಗತ್ಯವಿಲ್ಲ. ಇದು ಕ್ಷಯ, ಎಚ್‌ಐವಿ, ಎಚ್‌1ಎನ್‌1ಗಿಂತ ಅಪಾಯಕಾರಿಯಲ್ಲ. ಆತ್ಮವಿಶ್ವಾಸ ಇರಬೇಕು. ವೈದ್ಯರನ್ನು ನಂಬಬೇಕು’ ಎಂದು ಹೇಳಿದರು.

‘ನಮ್ಮ ಕಂಪನಿ ಕಾರ್ಮಿಕರಲ್ಲಿ ರೋಗ ಪತ್ತೆಯಾದ ಕೂಡಲೇ ಸ್ವಯಂಪ್ರೇರಿತನಾಗಿ ಮನೆಯವರಿಂದಲೂ ಅಂತರ ಕಾಯ್ದುಕೊಂಡಿದ್ದೆ. ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೆ. ಹೀಗಾಗಿ ಕುಟುಂಬದ ಸದಸ್ಯರ ಕೋವಿಡ್‌–19 ಪರೀಕ್ಷಾ ಫಲಿತಾಂಶವೂ ನೆಗೆಟಿವ್‌ ಬಂತು’ ಎಂದರು.

‘ವೈದ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಶುಶ್ರೂಷಕರು, ವಾರ್ಡ್‌ನ ಸ್ವಚ್ಛತಾ ಸಿಬ್ಬಂದಿಯ ಸೇವೆಯಿಂದ ನನಗೆ ಮರುಹುಟ್ಟು ದೊರೆತಂತಾಗಿದೆ. ಅವರಿಗೆ ನಾನು ಸದಾ ಆಭಾರಿ’ ಎಂದು ಹೇಳಿದರು.

ರಕ್ತದಾನ: ಪ್ಲಾಸ್ಮಾ ಮಾದರಿ ಸಂಗ್ರಹ
‘185 ರೋಗಿಯ ಇಡೀ ಕುಟುಂಬ ನಡೆದುಕೊಂಡ ರೀತಿ ಸಮಾಜಕ್ಕೆ ಮಾದರಿಯಾಗಿದೆ. ಪ್ರಾಥಮಿಕ ಸಂಪರ್ಕಿತರು ಸೇರಿ 6 ಮಂದಿ ನೆಗೆಟಿವ್‌ ಆಗಿ ಮನೆಗೆ ಮರಳಿದ್ದಾರೆ. ಗುಣಮುಖರಾದ ವ್ಯಕ್ತಿಯ ರಕ್ತ ಮಾದರಿ ಸಂಗ್ರಹಿಸಲಾಗಿದೆ. ಗಂಭೀರ ಸ್ಥಿತಿ ತಲುಪುವ ಇಬ್ಬರು ರೋಗಿಗಳನ್ನುಪ್ಲಾಸ್ಮಾ ಕಣಗಳಿಂದ ಗುಣಪಡಿಸಬಹುದಾಗಿದೆ’ ಎಂದು ವೈದ್ಯರೂ ಆದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.