ADVERTISEMENT

ರಾಜ್ಯದ‌ಲ್ಲಿ ಕುಸಿಯುತ್ತಿದೆ ಕೊರೊನಾ ಪಾಸಿಟಿವ್‌ ಪ್ರಕರಣ: ಇದು ಹೊಸ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 1:07 IST
Last Updated 31 ಮಾರ್ಚ್ 2020, 1:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಂಕಿತರ ಪ್ರಯೋಗಾಲಯ ಪರೀಕ್ಷೆಯಲ್ಲಿ ಕೋವಿಡ್‌–19 ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದ್ದು, ಇದು ಒಂದು ಉತ್ತಮ ಬೆಳವಣಿಗೆಯಾಗಿದೆ. ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಇದು ಸಾಧ್ಯ ಆಗಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್ ಹೇಳಿದ್ದಾರೆ.

‘ಮೈಸೂರಿನಲ್ಲಿ ಪಾಸಿಟಿವ್‌ ಪ್ರಕರಣ ಏರಿಕೆ ಆಗಿದೆ. ಆದರೆ 20 ದಿನದ ಹಿಂದಿನ ಕಾಲಕ್ಕೆ ಹೋಲಿಸಿದರೆ ಪಾಸಿಟಿವ್‌ ಪ್ರಕರಣಗಳ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ. ಇದೇ ರೀತಿಯಲ್ಲಿ ಲಾಕ್‌ಡೌನ್‌ ಮುಂದುವರಿದರೆ 40 ದಿನಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುವುದು ಸಾಧ್ಯವಿದೆ’ ಎಂದು ಅವರು ಸೋಮವಾರ ಇಲ್ಲಿ ತಿಳಿಸಿದರು.

88 ಕ್ಕೆ ಏರಿಕೆ: ರಾಜ್ಯದಲ್ಲಿ ಸೋಮವಾರ ಐದು ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 88ಕ್ಕೆ ಏರಿದೆ.

ADVERTISEMENT

ಚಿಕಿತ್ಸೆ ಪಡೆಯುತ್ತಿರುವ 79 ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಒಬ್ಬರು (ರೋಗಿ ಸಂಖ್ಯೆ 47) ವೆಂಟಿಲೇಟರ್‌ನಲ್ಲಿದ್ದಾರೆ. ಆರು ಮಂದಿ ಗುಣಮುಖರಾಗಿದ್ದಾರೆ.

ಸೋಮವಾರ ದೃಢಪಟ್ಟ ಐವರ ಪೈಕಿ ನಾಲ್ವರು ಮೈಸೂರಿನ ಔಷಧ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ (ರೋಗಿ ಸಂಖ್ಯೆ 52) ಸಂಪರ್ಕದಲ್ಲಿದ್ದವರು. ಇವರೆಲ್ಲ 21 ವರ್ಷದಿಂದ 34 ವರ್ಷದೊ ಳಗಿನವರು. ತುಮಕೂರಿನಲ್ಲಿ 13 ವರ್ಷದ ಬಾಲಕನಿಗೆ ಕೋವಿಡ್‌–19 ದೃಢಪಟ್ಟಿದ್ದು, ಈತನ ತಂದೆ (ರೋಗಿ ಸಂಖ್ಯೆ 60) ಸಹ ಸೋಂಕಿಗೆ ಒಳಗಾಗಿದ್ದಾರೆ.

ಚಲನವಲನದ ಮಾಹಿತಿ
‘ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಕೊರೊನಾ ನಿಗಾ ಆ್ಯಪ್‌ನಲ್ಲಿ (Corona Watch) ಮಂಗಳವಾರದಿಂದ ಪ್ರತ್ಯೇಕವಾಸದಲ್ಲಿರುವವರ ಚಲನವಲನದ ಮಾಹಿತಿ ಲಭಿಸಲಿದೆ. ಪ್ರತಿಯೊಬ್ಬರೂ ಎರಡು ಗಂಟೆಗಳಿಗೊಮ್ಮೆ ಸೆಲ್ಫಿ ತೆಗೆದು ಅಪ್‌ಲೋಡ್ ಮಾಡಲು ತಿಳಿಸಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್‌ ಸೋಮವಾರ ಇಲ್ಲಿ ತಿಳಿಸಿದರು.

‘ಸೋಂಕಿತರ ಸಂಖ್ಯೆ ಹೆಚ್ಚಾದರೆ ಜಿಲ್ಲಾ ಆಸ್ಪತ್ರೆಗಳಲ್ಲಿರುವ ಇತರ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೋಮವಾರ ನಡೆದ ವಿಡಿಯೊ ಸಂವಾದದಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಐಐಎಸ್‌ಸಿಯಲ್ಲಿ ಅಭಿವೃದ್ಧಿಪಡಿಸಲಾದ ಕೊರೊನಾ ಪರೀಕ್ಷಾ ಕಿಟ್‌ ಅನ್ನು ಕೇಂದ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಪರಿಶೀಲನೆಗೆ ಕಳುಹಿಸಲಾಗಿದೆ’ ಎಂದರು.

ಪ್ರತ್ಯೇಕವಾಸಗಳಲ್ಲಿ ಇರುವವರ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಲಾಗಿದೆ. ಸ್ವ ಇಚ್ಛೆಯಿಂದ ಟೆಲಿಮೆಡಿಸಿನ್‌ ಮೂಲಕ ಸೇವೆ ಸಲ್ಲಿಸಲು ಬಯಸುವ ವೈದ್ಯರಿಗೆ 08047192219 ಗೆ ಮಿಸ್ಡ್‌ ಕಾಲ್‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌–19 ಕುರಿತು ಅನುಮಾನ ಪರಿಹಾರಕ್ಕೆ ಹೊಸ ಸಂಪರ್ಕ ಸಂಖ್ಯೆ 9745697456 ಆರಂಭಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.