ADVERTISEMENT

ಸೋಂಕಿನ ನೆರಳಲ್ಲಿ ಪರೀಕ್ಷೆಗಾಗಿ ತಂದೆ ಮಗನ ಅಲೆದಾಟ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 20:50 IST
Last Updated 8 ಜುಲೈ 2020, 20:50 IST
   

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆಗಾಗಿ ಬೆಂಗಳೂರಿನ ತಂದೆ ಮಗ ನಾಲ್ಕು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಪರೀಕ್ಷೆಗೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಪ್ರಸಂಗದಿಂದ ಬಯಲಾಗಿದೆ.

ಇದಿಷ್ಟೇ ಅಲ್ಲ, ಸೋಂಕು ಪತ್ತೆಗೆಂದು ಆಸ್ಪತ್ರೆಗಳಿಗೆ ಹೋಗುವವರಿಗೆ ಅಲ್ಲಿನ ಅವ್ಯವಸ್ಥೆಯಿಂದಾಗಿ ಸೋಂಕು ತಗುಲುವ ಭೀತಿ ಎದುರಾಗಿರುವುದ ತಂದೆ ಮಗನ ಅನುಭವದಿಂದ ಗೊತ್ತಾಗಿದೆ.

’ಮೈಸೂರು ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನನ್ನ ತಂದೆ ಮತ್ತು ಅವರ ಸಹೋದ್ಯೋಗಿಗೆ ಜುಲೈ–1ರಂದು ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿತ್ತು. ನನ್ನ ತಂದೆಗೆ ಕೋವಿಡ್‌ನ ಲಕ್ಷಣಗಳೇನೂ ಇಲ್ಲವಾದ್ದರಿಂದ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿರಲಿಲ್ಲ. ತಂದೆ ಸಹೋದ್ಯೋಗಿ ಜುಲೈ–4ರಂದು ಪರೀಕ್ಷೆಗೆ ಒಳಗಾದರು. ಅವರಿಗೆ ಸೋಂಕು ತಗುಲಿರುವುದು ಜುಲೈ–6ರಂದು ಗೊತ್ತಾಯಿತು. ಹೀಗಾಗಿ ವೈದ್ಯರ ಬಳಿಗೆ ಹೋದೆವು. ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಅವರು ಸೂಚಿಸಿದರು. ಅವರ ಸಲಹೆ ಮೇರೆಗೆ ಸೋಂಕು ಪತ್ತೆ ಪರೀಕ್ಷೆಗೆಂದು ಹೋದ ನಾವು ದಿನವಿಡೀ ನಾಲ್ಕು ಆಸ್ಪತ್ರೆ ಅಲೆದೆವು,’ ಎಂದು ಸೋಂಕು ಪತ್ತೆ ಪರೀಕ್ಷೆಗೆ ಹೋಗಿದ್ದ ವ್ಯಕ್ತಿಯ ಮಗ ವಿವರಿಸಿದ್ದಾರೆ.

ADVERTISEMENT

’ಮೊದಲಿಗೆ ಬನಶಂಕರಿ 2ನೇ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿರುವ ಫೀವರ್‌ ಕ್ಲಿನಿಕ್‌ಗೆ ಹೋದೆವು. ಅಲ್ಲಿ ಹಲವರು ಸೋಂಕು ಪತ್ತೆಗೆಂದು ಜಮಾಯಿಸಿದ್ದರು. ದೈಹಿಕ ಅಂತರ ಅಲ್ಲಿ ಕಾಣೆಯಾಗಿತ್ತು. ಅದರ ಬಗ್ಗೆ ಆಸ್ಪತ್ರೆ ಸಿಬ್ಬಂದಿ ತಲೆ ಕೆಡಿಸಿಕೊಂಡಿರಲಿಲ್ಲ. ಕೆಲವರು ಮಾಸ್ಕ್‌ ಹಾಕಿದ್ದರು, ಕೆಲವರು ಕುತ್ತಿಗೆಗೆ ಇಳಿಬಿಟ್ಟಿದ್ದರು. ಅವರ ವರ್ತನೆ ನೋಡಿದರೆ ನಮಗೇ ಕೋವಿಡ್‌ ಬರುವ ಭಯ ಕಾಡಿತು. ಸಾಲಿನಲ್ಲಿ ಸಾಗಿ ಬಂದ ನಮ್ಮನ್ನು ವಿಚಾರಿಸಿದ ಆರೋಗ್ಯ ಸಿಬ್ಬಂದಿ ’ನಿಮಗೆ ಲಕ್ಷಣಗಳೇನೂ ಇಲ್ಲ. ಪರೀಕ್ಷೆ ಬೇಕಿಲ್ಲ,’ ಎಂದರು. ಆದರೆ, ಸಹೋದ್ಯೋಗಿಗೆ ಸೋಂಕು ತಗುಲಿರುವುದು, ಮನೆಯಲ್ಲಿ ಮಕ್ಕಳು, ಮೆಧುಮೇಹಿಗಳಿರುವುದನ್ನು ಹೇಳಿ ಪರೀಕ್ಷೆ ಮಾಡಿಸಲೇಬೇಕಾದ ಅನಿವಾರ್ಯತೆಯನ್ನು ನನ್ನ ತಂದೆ ವಿವರಿಸಿದರು. ಆಗ ಆರೋಗ್ಯ ಸಿಬ್ಬಂದಿ ವೈದ್ಯರನ್ನು ಕಾಣುವಂತೆ ಸೂಚಿಸಿದರು. ಒಂದು ಗಂಟೆ ನಂತರ ವೈದ್ಯರು ಬಂದರು. ಅವರಿಗೆ ಪರಿಸ್ಥಿತಿಯನ್ನು ಮತ್ತೊಮ್ಮೆ ವಿವರಿಸಿದೆವು. ಅದಕ್ಕವರು, ಇಲ್ಲಿ ಪರೀಕ್ಷೆ ಮಾಡುತ್ತಿಲ್ಲ. ಜಯನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವಂತೆ ತಿಳಿಸಿ, ಹೆಲ್ತ್‌ ರಿಪೋರ್ಟ್‌ ಬರೆದುಕೊಟ್ಟರು’ ಎಂದು ತಮಗೆ ಎದುರಾದ ಪರೀಕ್ಷೆ ನಿರಾಕರಣೆಯನ್ನು ವಿವರಿಸಿದ್ದಾರೆ.

‘ಜಯನಗರದ ಸರ್ಕಾರಿ ಆಸ್ಪತ್ರೆಗೆ ಬಂದರೆ, ಅಲ್ಲಿಯೂ ದೈಹಿಕ ಅಂತರ ಮಾಯ. ಪರೀಕ್ಷೆಗಾಗಿ ಕಾದು ನಿಂತವರು ಧರಿಸಿದ್ದ ಕಳಪೆ ಮಾಸ್ಕ್‌ಗಳು ಭಯ ಹುಟ್ಟಿಸುತ್ತಿದ್ದವು. ಅಲ್ಲಿ ಪರೀಕ್ಷೆಗೂ ಮುನ್ನ ವೈದ್ಯಾಧಿಕಾರಿ ಸಹಿ ಬೇಕು. ವೈದ್ಯಾಧಿಕಾರಿ ಕೊಠಡಿ ಮುಂದೆಯೂ ಸಾಲು. ಅಲ್ಲದೆ, ಕೋವಿಡ್‌ ರೋಗಿಗಳನ್ನು ಅಲ್ಲಿ ಯಾವ ಅಂತರವೂ ಇಲ್ಲದೇ ಎಲ್ಲರ ನಡುವೆಯೇ ಕರೆದೊಯ್ಯಲಾಗುತ್ತದೆ. ಇದು ಜನರನ್ನು ಸೋಂಕಿತರ ಸಂಪರ್ಕಕ್ಕೆ ದೂಡುತ್ತದೆ. ಅಲ್ಲದೆ, ಪರೀಕ್ಷೆಗೆಂದು ಬಂದವರಿಗೆ ಅನುಮತಿ ನೀಡದಂತೆ ಅಲ್ಲಿನ ಸಿಬ್ಬಂದಿ ವೈದ್ಯಾಧಿಕಾರಿಗಳ ಮೇಲೆಯೇ ಜೋರು ಮಾಡಿದ ಪ್ರಸಂಗವೂ ನಡೆಯಿತು. ಕೋವಿಡ್‌ನಿಂದ ಮೃತಪಟ್ಟವರ ಸಂಬಂಧಿಗಳು ಅಲ್ಲಿ ಮೃತದೇಹಕ್ಕಾಗಿ ಗೋಳಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದ ಭಯಗೊಂಡು ಖಾಸಗಿ ಆಸ್ಪತ್ರೆಗೆ ಪರೀಕ್ಷೆಗೆಂದು ಹೋದರೆ ಅವರು, ತಪಾಸಣೆ ನಡೆಸುವುದಾಗಿ ಮೊದಲಿಗೆ ಹೇಳಿ ನಂತರ ಇಲ್ಲ ಎಂದರು. ಕೊನೆಗೆ ಕೋಣಕುಂಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸುವಂತಾಯಿತು. ಜುಲೈ 6ರಂದು ಪರೀಕ್ಷೆ ನಡೆದರೂ ಇನ್ನೂ ವರದಿ ಬಂದಿಲ್ಲ,’ ಎಂದು ಅವರು ತಾವು ಎದುರಿಸಿದ ಸಂದರ್ಭವನ್ನು ವಿವರಿಸಿದ್ದಾರೆ.

***

ಪರೀಕ್ಷೆಗೆಂದು ಆಸ್ಪತ್ರೆಗೆ ಬರುವ ಯಾರೊಬ್ಬರಿಗೂ ಪರೀಕ್ಷೆ ಮಾಡುವುದಿಲ್ಲ ಎಂದು ಹೇಳುವಂತೆ ಇಲ್ಲ. ಹಾಗೇನಾದರೂ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪರೀಕ್ಷೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಬೇಡ. ಇರಬಹುದಾದ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸುತ್ತೇವೆ.

– ಡಾ. ಕೆ ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.