ADVERTISEMENT

ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ವಿಫಲ: ಬೀದಿಗಿಳಿಯಲು ಮುಂದಾದ ‘ಕೈ’ ನಾಯಕರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 9:08 IST
Last Updated 20 ಜುಲೈ 2020, 9:08 IST
ಕಾಂಗ್ರೆಸ್
ಕಾಂಗ್ರೆಸ್    

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ‘ಲೆಕ್ಕ ಕೊಡಿ’ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌, ಇದೀಗ ರಾಜ್ಯ ಸರ್ಕಾರದ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸಲು ಮುಂದಾಗಿದೆ.

ಪಕ್ಷದ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಪಕ್ಷದ ಕೊರೊನಾ ಕಾರ್ಯಪಡೆಯ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸೋಮವಾರ ನಡೆಯಿತು. ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾದ ಕುರಿತು ಪಕ್ಷದ ನಾಯಕರ ಜೊತೆ ಶಿವಕುಮಾರ್‌ ಚರ್ಚೆ ನಡೆಸಿದರು.

‘ರಾಜ್ಯ ಸರ್ಕಾರ ಕೊರೊನ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದೆ. ಈ ಮಧ್ಯೆ, ಖಾಸಗಿ ಆಸ್ಪತ್ರೆಗಳು ಹಾಸಿಗೆ ಕೊಡುತ್ತಿಲ್ಲ. ಜನರ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿರುವ ನಾಯಕರು, ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ADVERTISEMENT

ಸಭೆಗೂ ಮೊದಲು ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, ‘ವೈದ್ಯಕೀಯ ಪರಿಕರಗಳ ಖರೀದಿಗೆ ತಗಲಿದ ವೆಚ್ಚದ ಬಗ್ಗೆ ನಾವು ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದೆವು. ಅವರು ಮೊದಲು ಉತ್ತರ ಕೊಡಲಿ. ರಾಜ್ಯದ ಜನರಿಗೆ ಎಲ್ಲವೂ ಈಗ ಅರ್ಥವಾಗುತ್ತಿದೆ’ ಎಂದರು.

ಶಾಸಕ ಯು.ಟಿ. ಖಾದರ್ ಮಾತನಾಡಿ, ‘ಕೊರೊನಾ ನಿಯಂತ್ರಣ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಟೀಕೆ ಟಿಪ್ಪಣಿಯೂ ಮಾಡುತ್ತಿಲ್ಲ. ಸರ್ಕಾರವನ್ನು ಉತ್ತಮವಾಗಿ ನಡೆಸುವುದಕ್ಕೆ ನಮ್ಮದು ಚುಚ್ಚುಮದ್ದು ಎಂದು ತಿಳಿದುಕೊಳ್ಳಿ. ಅವ್ಯವಹಾರಗಳ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಲಿ’ ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ‘ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಲೇ ಇದೆ. ನಾಲ್ಕು ತಿಂಗಳು ಕಳೆಯಿತು. 70 ಸಾವಿರ ಗಂಟಲು ದ್ರವ ಪರೀಕ್ಷೆ ಫಲಿತಾಂಶ ಬರಬೇಕಾಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಆರ್ಥಿಕ ಸಂಕಷ್ಟ, ಆರೋಗ್ಯ ಸಂಕಷ್ಟ ಎರಡು ಎದುರಾಗಿದೆ. ಪ್ರತಿಪಕ್ಷವಾಗಿ ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರಿಗಾಗಿ ಸಹಾಯವಾಣಿ ಆರಂಭಿಸುತ್ತೇವೆ’ ಎಂದರು.

ಮತ್ತೊಬ್ಬ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ತಮಿಳುನಾಡು ಸರ್ಕಾರ ₹4.80 ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿದೆ. ಆದರೆ ನಮ್ಮ ಸರ್ಕಾರ ₹ 18 ಲಕ್ಷಕ್ಕೆ ಖರೀದಿಸಿದೆ. ಬಿಬಿಎಂಪಿ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಅವ್ಯವಹಾರ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್.ಕೆ. ಪಾಟೀಲ, ರಮೇಶ್ ಕುಮಾರ್, ಯು.ಟಿ.ಖಾದರ್, ಎಚ್.ಎಂ. ರೇವಣ್ಣ, ಕೆ.ಜೆ. ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ವಕ್ತಾರ ವಿ.ಎಸ್. ಉಗ್ರಪ್ಪ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.