ADVERTISEMENT

ಕೋವಿಡ್ 3ನೇ ಅಲೆ: ಸಜ್ಜಾಗುತ್ತಿದೆ ಮಕ್ಕಳ ಐಸಿಯು

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ –19 ಪೀಡಿತ ಮಕ್ಕಳ ಚಿಕಿತ್ಸೆಗೆ ಸಿದ್ಧತೆ

ವರುಣ ಹೆಗಡೆ
Published 11 ಜುಲೈ 2021, 20:50 IST
Last Updated 11 ಜುಲೈ 2021, 20:50 IST
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯು ಘಟಕ – ಪ್ರಜಾವಾಣಿ ಚಿತ್ರ
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯು ಘಟಕ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವ ಕಾರಣ ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿಯೇ 46 ಹಾಸಿಗೆಗಳ ಅತ್ಯಾಧುನಿಕ ತೀವ್ರ ನಿಗಾ ಘಟಕವನ್ನು (ಐಸಿಯು) ಸಜ್ಜುಗೊಳಿಸಲಾಗುತ್ತಿದೆ.

ಕೋವಿಡ್‌ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಹಾಗೂ ಮಧ್ಯಮ ವಯಸ್ಕರು ಸೋಂಕಿತರಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಕೆಲ ಸೋಂಕಿತರು ವೈದ್ಯಕೀಯ ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಿದ್ದರು. ಅಕ್ಟೋಬರ್ ಅಥವಾ ನವೆಂಬರ್ ಬಳಿಕ ನಗರದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಂದಾಜು ಮಾಡಿದೆ. ಹೀಗಾಗಿ, ಈಗಿನಿಂದಲೇ ಸರ್ಕಾರಿ ಆಸ್ಪತ್ರೆಗಳನ್ನು ಅಣಿಗೊಳಿಸಲಾಗುತ್ತಿದೆ.

ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ 18 ಮಂದಿ ತಜ್ಞ ವೈದ್ಯರ ಸಮಿತಿಯು ಸರ್ಕಾರಕ್ಕೆ ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಿದೆ. ಬೆಂಗಳೂರಿನಲ್ಲಿಯೇ 45,958 ಮಕ್ಕಳು ಸೋಂಕಿತರಾಗುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಕೋವಿಡ್ ಪೀಡಿತ ಮಕ್ಕಳ ಚಿಕಿತ್ಸೆಗೆ ಸುಮಾರು 300 ಹಾಸಿಗೆಗಳನ್ನು ನಗರದ ಆಸ್ಪತ್ರೆಗಳಲ್ಲಿ ಮೀಸಲಿಡಲಾಗಿದೆ. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಈಗಾಗಲೇ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ಅದೇ ರೀತಿ, ಕೆ.ಸಿ. ಜನರಲ್ ಆಸ್ಪತ್ರೆಯನ್ನೂ ಸಜ್ಜುಗೊಳಿಸಲಾಗುತ್ತಿದೆ.

ADVERTISEMENT

ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳ ಚಿಕಿತ್ಸೆಗೆ ನಗರದ ಆಸ್ಪತ್ರೆಗಳಲ್ಲಿ 1,838ರಿಂದ 3,677 ಹಾಸಿಗೆಗಳನ್ನು ಹೊಂದುವ ಅಗತ್ಯವಿದೆ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಅದೇ ರೀತಿ, ತೀವ್ರವಾಗಿ ಅಸ್ವಸ್ಥಗೊಳ್ಳುವ ಮಕ್ಕಳ ಚಿಕಿತ್ಸೆಗೆ ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ವರದಿಯಲ್ಲಿ ಸೂಚಿಸಲಾಗಿದೆ. ಹೀಗಾಗಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಈಗಿನ ಕಟ್ಟಡದ ಮೇಲೆಯೇ ಮತ್ತೊಂದು ಮಹಡಿ ನಿರ್ಮಿಸಲಾಗುತ್ತಿದ್ದು, ಅಲ್ಲಿ ಐಸಿಯು ಘಟಕ ಅಳವಡಿಸಲು ಯೋಜನೆ ರೂಪಿಸಲಾಗಿದೆ.

ವೆಂಟಿಲೇಟರ್ ಅಳವಡಿಕೆ: ‘ಸದ್ಯ ಮಕ್ಕಳ ಚಿಕಿತ್ಸೆಗೆ 35 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಮೂರನೇ ಅಲೆಯ ಸಂಬಂಧ ಆ ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಕೆ ಮಾಡಲಾಗುತ್ತದೆ. ಎರಡನೇ ಅಲೆಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗಿತ್ತು. ಮಕ್ಕಳಿಗಾಗಿಯೇ ಸದ್ಯ ಆರು ಐಸಿಯು ಹಾಸಿಗೆಗಳಿವೆ. ಅವರ ಚಿಕಿತ್ಸೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನೂ ಅಳವಡಿಸಲಾಗುತ್ತಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಆರ್. ವೆಂಕಟೇಶಯ್ಯ ತಿಳಿಸಿದರು.

‘ಮಕ್ಕಳ ಆರೈಕೆ ಬಗ್ಗೆ ಸಾಮಾನ್ಯ ವೈದ್ಯರಿಗೂ ತರಬೇತಿ ನೀಡಲಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ವೈದ್ಯರು, ಶುಶ್ರೂಷಕರು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂರನೇ ಅಲೆ ಎದುರಿಸಲು ಇನ್ನಷ್ಟು ಮಕ್ಕಳ ತಜ್ಞರ ನೇಮಕಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.