ADVERTISEMENT

6 ತಿಂಗಳಲ್ಲಿ ಲಸಿಕೆ: ನಿತ್ಯ 2.82 ಲಕ್ಷ ಡೋಸ್ ವಿತರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 19:06 IST
Last Updated 3 ಜುಲೈ 2021, 19:06 IST
   

ಬೆಂಗಳೂರು: ಆರು ತಿಂಗಳಲ್ಲಿ ರಾಜ್ಯದ ಶೇ 65 ರಷ್ಟು ಜನರಿಗೆ ಕೋವಿಡ್ ಲಸಿಕೆ ಒದಗಿಸಬೇಕಾದರೆ ಪ್ರತಿನಿತ್ಯ ಸರಾಸರಿ 2.82 ಲಕ್ಷ ಡೋಸ್ ಲಸಿಕೆಯನ್ನು ವಿತರಿಸಬೇಕು ಎಂದು ತಜ್ಞರ ಅಧ್ಯಯನವೊಂದು ಅಂದಾಜಿಸಿದೆ.

ರಾಜ್ಯದಲ್ಲಿ ಈವರೆಗೆ 2.36 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಅದರಲ್ಲಿ 1.95 ಕೋಟಿ ಮಂದಿ ಮೊದಲ ಡೋಸ್ ಹಾಗೂ 40.34 ಲಕ್ಷ ಮಂದಿ ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

ಪುಣೆಯ ರೆಕ್ಟರ್ ಹೆಲ್ತ್‌ಕೇರ್‌ನ ಬಬ್ಬ ಕ್ಲಿನಿಕಲ್ ಡಾಟಾ ವಿಜ್ಞಾನಿ ಹಾಗೂ ಬೆಂಗಳೂರಿನ ಎಚ್‌ಸಿಜಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಇಬ್ಬರು ತಜ್ಞರನ್ನು ಒಳಗೊಂಡ ತಂಡವು ಕೋವಿಡ್‌ ಲಸಿಕೆಗೆ ಸಂಬಂಧಿಸಿದ ಅಧ್ಯಯನ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಇದು ಜೂನ್ 30ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಿದೆ. ‌

ADVERTISEMENT

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 35ರಷ್ಟು ಮಂದಿ 18 ವರ್ಷದೊಳಗಿನವರಾಗಿರುವ ಕಾರಣ ಅವರನ್ನು ಈ ಅಧ್ಯಯನ ಮಾದರಿಗೆ ಒಳಪಡಿಸಿಲ್ಲ. ರಾಜ್ಯದಲ್ಲಿ ಜು.3ರಂದು 4.75 ಲಕ್ಷ ಡೋಸ್ ಲಸಿಕೆನು ವಿತರಿಸಲಾಗಿದೆ. ಜು.2ರಂದು 2.34 ಲಕ್ಷ ಡೋಸ್, ಜು.1ರಂದು 1.88 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು.

‘ದತ್ತಾಂಶದ ಪ್ರಕಾರ 45 ವರ್ಷ ಮೇಲ್ಟಟ್ಟವರಿಗೆ ಮೊದಲ ಡೋಸ್ ಲಸಿಕೆ ಒದಗಿಸಲು ಕರ್ನಾಟಕದಲ್ಲಿ ಆದ್ಯತೆ ನೀಡಲಾಗಿದೆ. ಉದಾಹರಣೆಗೆ ಜೂ. 30ರ ವೇಳೆಗೆ 1,40,836 ಮಂದಿಗೆ ಮೊದಲ ಡೋಸ್ ಲಸಿಕೆ ಒದಗಿಸಲಾಗಿದೆ. ಅದರಲ್ಲಿ 45,722 ಮಂದಿಗೆ ಮಾತ್ರ ಎರಡನೇ ಡೋಸ್ ನೀಡಲಾಗಿದೆ’ ಎಂದುಈ ಅಧ್ಯಯನ ಮಾದರಿಯಲ್ಲಿ ಕಾರ್ಯನಿರ್ವಹಿಸಿರುವ ಪುಣೆಯ ರೆಕ್ಟರ್ ಹೆಲ್ತ್‌ಕೇರ್‌ನ ವೈದ್ಯಕೀಯ ನಿರ್ದೇಶಕ ಮತ್ತು ಕ್ಲಿನಿಕಲ್ ಡೇಡಾ ವಿಜ್ಞಾನಿ ಡಾ. ಉಜ್ವಲ್ ರಾವ್ ತಿಳಿಸಿದರು.

‘ಈ ದರವನ್ನು ಆಧರಿಸಿ ನಾವು ವಯಸ್ಕರಿಗೆ ಲಸಿಕೆ ಒದಗಿಸುವಿಕೆ ಬಗ್ಗೆ ವಿಶ್ಲೇಷಣೆ ಮಾಡಿದ್ದೇವೆ. ಪ್ರತಿನಿತ್ಯ ಕನಿಷ್ಠ 2.82 ಲಕ್ಷ ಡೋಸ್ ಲಸಿಕೆಯನ್ನು ಒದಗಿಸಿದಲ್ಲಿ ಮುಂಬರು ಡಿ.31ರೊಳಗೆ ರಾಜ್ಯದ ಎಲ್ಲ ವಯಸ್ಕರಿಗೆ ಲಸಿಕೆ ದೊರೆಯಲಿದೆ. ಲಸಿಕಾ ಅಭಿಯಾನಕ್ಕೆ ವೇಗ ನೀಡಿದಲ್ಲಿ ಮೂರನೇ ಅಲೆಯಲ್ಲಿ ಕಾಣಿಸುವ ರೂಪಾಂತರ ವೈರಾಣುವನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.