ADVERTISEMENT

ಕೊರೊನಾ ಭೀತಿ: ಕರ್ನಾಟಕದಿಂದ ದೆಹಲಿ ತಬ್ಲಿಗಿ ಜಮಾತ್‌ಗೆ ಹೋದವರ ವಿವರ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 16:11 IST
Last Updated 1 ಏಪ್ರಿಲ್ 2020, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿನ ತಬ್ಲಿಗಿ ಜಮಾತ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಅನೇಕರಿಗೆ ಕೊರೊನಾ ವೈರಸ್ ಸೋಂಕು (ಕೋವಿಡ್–19) ತಗುಲಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಅಲ್ಲಿಗೆ ತೆರಳಿರುವವರ ಪತ್ತೆ ಕಾರ್ಯ ನಡೆಯುತ್ತಿದೆ.

ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಮೂಲದ 342 ಜನರಲ್ಲಿ, ಈಗ ಬೆಂಗಳೂರಿಂದ 4 ಹಾಗೂ ಬೆಳಗಾವಿ ಜಿಲ್ಲೆಯಿಂದ 5 ಜನರನ್ನು ಸೇರಿ ಒಟ್ಟು 200 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದವರನ್ನು ಶೀಘ್ರವೇ ಗುರುತಿಸುವ ಕಾರ್ಯ ನಡೆದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಯಾವ್ಯಾವ ಜಿಲ್ಲೆಯಿಂದ ಎಷ್ಟೆಷ್ಟು ಜನ ದೆಹಲಿ ತಬ್ಲಿಗಿ ಜಮಾತ್‌ಗೆ ತೆರಳಿದ್ದರು ಎಂಬ ಈವರೆಗಿನಮಾಹಿತಿ ಇಲ್ಲಿದೆ:

ADVERTISEMENT

ಬೆಂಗಳೂರು: ಆರೋಗ್ಯ ಸಚಿವರು ನೀಡಿರುವ ಮಾಹಿತಿ ಪ್ರಕಾರ,ಬೆಂಗಳೂರಿನಿಂದದೆಹಲಿ ತಬ್ಲಿಗಿ ಜಮಾತ್‌ಗೆ ತೆರಳಿದ್ದ ನಾಲ್ವರನ್ನು ಕ್ವಾರಂಟೈನ್ಮಾಡಲಾಗಿದೆ. ಇನ್ನೂ ಅನೇಕರು ಭಾಗವಹಿಸಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ಕೊಡಗು:ತಬ್ಲಿಗಿ ಜಮಾತ್‌ನಲ್ಲಿಜಿಲ್ಲೆಯ11 ಮಂದಿ ಪಾಲ್ಗೊಂಡಿದ್ದು ಬೆಳಕಿಗೆ ಬಂದಿದೆ.ಆದರೆ, ಅದರಲ್ಲಿ ಬಹುತೇಕರು ಜಿಲ್ಲೆಗೆ ವಾಪಸ್ಸಾಗಿಲ್ಲ.ಜಿಲ್ಲೆಯಿಂದ ಭಾಗವಹಿಸಿದ್ದ 11 ಮಂದಿಯ ವಿಳಾಸ ಪತ್ತೆ ಮಾಡಲಾಗಿದ್ದು, ಅಧಿಕಾರಿಗಳ ತಂಡವು ಅವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಈಪೈಕಿ, 5 ಮಂದಿ ದೆಹಲಿಯಲ್ಲೇ ಕ್ವಾರಂಟೈನ್‌ನಲ್ಲಿ ಇದ್ದಾರೆ. ಇನ್ನೂ 5 ಮಂದಿ ಹೊರ ಜಿಲ್ಲೆಗಳಲ್ಲಿ ವಾಸವಿದ್ದು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಚಾಮರಾಜನಗರ: ತಬ್ಲಿಗಿ ಜಮಾತ್‌ನಲ್ಲಿಜಿಲ್ಲೆಯ 12 ಜನರು ಭಾಗವಹಿಸಿರುವ ಬಗ್ಗೆ ಮಾಹಿತಿ‌ ಲಭ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಪೈಕಿ‌ ಮೂವರು ಸಿಕ್ಕಿದ್ದು, ಉಳಿದವರ ಪತ್ತೆ ಕಾರ್ಯ‌ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾದಗಿರಿ: ಜಿಲ್ಲೆಯ ಐವರು ದೆಹಲಿ ತಬ್ಲಿಗಿ ಜಮಾತ್‌ಗೆ ಮಾರ್ಚ್ 13 ರಂದು ತೆರಳಿದ್ದರು. ಮಾರ್ಚ್ 19 ಮರಳಿ ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಂ.ಎಸ್.ಪಾಟೀಲ ತಿಳಿಸಿದ್ದಾರೆ. ಇವರಲ್ಲಿ ಇಬ್ಬರುಯಾದಗಿರಿ, ಇಬ್ಬರು ಸುರಪುರ ಮತ್ತು ಒಬ್ಬರು ಶಹಾಪುರದವರು.

ಚಿತ್ರದುರ್ಗ: ಎಂಟು ಜನರು ದೆಹಲಿ ತಬ್ಲಿಗಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದು, ಎಲ್ಲರನ್ನೂ ಪತ್ತೆ ಮಾಡಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಕೊರೊನಾ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಇವರು ಮಾರ್ಚ್ 21ರಿಂದಲೇ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಫಾಲಕ್ಷ ಮಾಹಿತಿ ನೀಡಿದ್ದಾರೆ. ಹಿರಿಯೂರಿನ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಹೊರ ರಾಜ್ಯದ ಇತರ 12 ಜನರನ್ನು ತಾಲ್ಲೂಕು ಆಡಳಿತ ಪತ್ತೆ ಮಾಡಿದೆ. ಸರ್ವಜನಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ್ದಾರೆ.

ಬಾಗಲಕೋಟೆ: ದೆಹಲಿ ತಬ್ಲಿಗಿ ಜಮಾತ್‌ನಲ್ಲಿ ಪಾಲ್ಗೊಂಡಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ನಿಗಾದಲ್ಲಿ ಇಡಲಾಗಿದೆ. ಆ ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಆದರೂ ಮುಂಜಾಗರೂಕತಾ ಕ್ರಮವಾಗಿ ಕ್ವಾರೆಂಟೈನ್‌ಗೆ ಒಳಪಡಿಸಿದ್ದೇವೆ. ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಆ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದವರ ಮೇಲೂ ನಿಗಾ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ ದೇಸಾಯಿ ತಿಳಿಸಿದರು.

ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಜಿಲ್ಲೆಯ ಇನ್ನಷ್ಟು ಮಂದಿ ಭಾಗವಹಿಸಿರುವ ಮಾಹಿತಿ ಇದೆ. ಅವರ ಪತ್ತೆ ಕಾರ್ಯ ನಡೆದಿದೆ. ದೆಹಲಿಗೆ ಹೋಗಿ ಬಂದವರು ತಕ್ಷಣ ತಹಶೀಲ್ದಾರ ಕಚೇರಿಗೆ ತೆರಳಿ ಮಾಹಿತಿ ನೀಡುವಂತೆ ಜಿಲ್ಲಾ ವಕ್ಫ್ ಸಮಿತಿ ಮೂಲಕ ಮಸೀದಿಗಳಲ್ಲಿ ಪ್ರಕಟಣೆ ಹೊರಡಿಸಲಾಗಿದೆ ಎಂದರು.

ಮುಧೋಳದ ಆರು ಮಂದಿ, ಬಾಗಲಕೋಟೆ ತಾಲ್ಲೂಕಿನ ಕಲಾದಗಿಯ ಇಬ್ಬರು ಸೇರಿದಂತೆ ಜಿಲ್ಲೆಯಿಂದ 16 ಜನರು ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ಇದೆ. ಅವರನ್ನು ಸಂಪರ್ಕಿಸುವ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲಾರ: ತಬ್ಲಿಗಿ ಜಮಾತ್‌ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆಯ ವೇಳೆ ಕೋಲಾರ ಜಿಲ್ಲೆಯ 34 ಮಂದಿ ದೆಹಲಿಗೆ ಹೋಗಿದ್ದ ಸಂಗತಿ ಬೆಳಕಿಗೆ ಬಂದಿದೆ

ದಕ್ಷಿಣ ಕನ್ನಡ: ತಬ್ಲಿಗಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ಉಳ್ಳಾಲದ ತೊಕ್ಕೊಟ್ಟು ಪಿಲಾರು ನಿವಾಸಿಗಳಾದ ನಾಲ್ವರನ್ನು ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಗೆ ಮಂಗಳವಾರ ತಡರಾತ್ರಿ ದಾಖಲಿಸಿರುವ ಪೊಲೀಸರು, ಬುಧವಾರ ಆರೋಗ್ಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ ಒಬ್ಬರು ಚಾಲಕ ಮತ್ತು ಮತ್ತೊಬ್ಬರು ಸುಗಂಧ ದ್ರವ್ಯಗಳ ಮಾರಾಟಗಾರರಾಗಿದ್ದು, ಇಬ್ಬರೂ ತಮ್ಮ ಪತ್ನಿ ಸಮೇತ ಹೋಗಿದ್ದರು ಎನ್ನಲಾಗಿದೆ. ಸಂಘಟನೆಯೊಂದರ ಮುಖಂಡನಾಗಿರುವ ಉಪ್ಪಿನಂಗಡಿಯ ವ್ಯಕ್ತಿ ಕೂಡಾ ದೆಹಲಿ ಮಸೀದಿಯ ಧಾರ್ಮಿಕ ಸಭೆಗೆ ತೆರಳಿದ್ದರು ಎನ್ನಲಾಗಿದ್ದು, ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿ: ತಬ್ಲಿಗಿ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಇಂಡೋನೇಷ್ಯಾ ತಬ್ಲಿಗಿ ಜಮಾತ್‌ನ 10 ಮಂದಿ ಧರ್ಮ ಪ್ರಚಾರಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಮಸೀದಿಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರು ನಿಜಾಮುದ್ದೀಮ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಧಾರ್ಮಿಕ ಮುಖಂಡರ ಆದೇಶದ ಮೇರೆಗೆ ಬೆಂಗಳೂರಿಗೆ, ನಂತರ ಬೆಳಗಾವಿಗೆ ಬಂದು ಧರ್ಮ ಪ್ರಚಾರ ಕೈಗೊಂಡಿದ್ದರು. ಲಾಕ್ ಡೌನ್ ಘೋಷಣೆಯಾದ ಸಂದರ್ಭದಲ್ಲಿ ಇವರೆಲ್ಲರೂ ಇಲ್ಲೇ ಇದ್ದರು. ನಂತರ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಅವರಲ್ಲಿ ಕೊರೊನಾ ವೈರಾಣು ಸೋಂಕು ಲಕ್ಷಣಗಳು ಕಂಡುಬಂದಿಲ್ಲ. ಆರೋಗ್ಯವಾಗಿದ್ದಾರೆ. ಆ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಇತರ ಪ್ರದೇಶದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಇವರ ಗಂಟಲು ದ್ರವದ ಮಾದರಿಗಳನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದಿಲ್ಲ' ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ ತಿಳಿಸಿದ್ದಾರೆ. ಅವರ ಪಾಸ್ ಪೋರ್ಟ್‌ಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಬೆಳಗಾವಿಯ ಇನ್ನೂ ಅನೇಕರು ಭಾಗವಹಿಸಿರುವ ಸಾಧ್ಯತೆ ಇದೆ. ಬೈಲಹೊಂಗಲ, ಹುಕ್ಕೇರಿ ಸೇರಿದಂತೆ ‌ವಿವಿಧ ತಾಲ್ಲೂಕುಗಳ ತಬ್ಲೀಗ್ ಜಮಾತ್ ಪರಿಪಾಲಕರು ಹತ್ತು ದಿನಗಳ ಸೇವೆಗೆಂದು ದೆಹಲಿಗೆ ಹೋಗುವ ಪರಿಪಾಠವಿದೆ. ಆ ಸಭೆಯಲ್ಲಿ ಪಾಲ್ಗೊಂಡಿದ್ದ ಸೇವಕರ ಕುರಿತ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ.

ಯಾದಗಿರಿ:ಜಿಲ್ಲೆಯ ಐವರು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮಸೀದಿಗೆ ಮಾರ್ಚ್ 13ರಂದು ತೆರಳಿದ್ದರು. ಮಾರ್ಚ್ 17 ಮತ್ತು 19ರಂದು ಮರಳಿ ಬಂದಿದ್ದಾರೆ. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಂ.ಎಸ್.ಪಾಟೀಲ ತಿಳಿಸಿದ್ದಾರೆ.

ಉಡುಪಿ: ಜಿಲ್ಲೆಯಿಂದ ಯಾರೂ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಡಪಡಿಸಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯಿಂದ ಯಾರೂ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.