ADVERTISEMENT

ಲಾಕ್‌ಡೌನ್: ರಾಜ್ಯದ ಹಲವೆಡೆ ಸುಖಾಸುಮ್ಮನೆ ತಿರುಗಿದವರಿಗೆ ಬಿತ್ತು ಲಾಠಿಯೇಟು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 16:24 IST
Last Updated 25 ಮಾರ್ಚ್ 2020, 16:24 IST
ಕೊಪ್ಪಳದಲ್ಲಿ ಲಾಠಿಚಾರ್ಜ್‌ –ಪ್ರಜಾವಾಣಿ ಚಿತ್ರ
ಕೊಪ್ಪಳದಲ್ಲಿ ಲಾಠಿಚಾರ್ಜ್‌ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಲಾಕ್‌ಡೌನ್‌ನ ಮೊದಲ ದಿನ ರಾಜ್ಯದ ಹಲವೆಡೆ ಲಾಠಿಚಾರ್ಜ್‌ ನಡೆದಿದೆ.

ಸುಖಾಸುಮ್ಮನೆ ರಸ್ತೆಯಲ್ಲಿ ತಿರುಗಾಡಿದವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.

ಬೆಳಗಾವಿ ನಗರದಲ್ಲಿ, ಚಿಕ್ಕೋಡಿಯಲ್ಲಿ ನಿಯಮ ಮೀರಿ ಹೊರಬಂದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಮೈಸೂರಿನ ವಾಜಮಂಗಲದಲ್ಲಿಯೂ ಇದೇ ಪುನರಾವರ್ತನೆಯಾಗಿದೆ.

ADVERTISEMENT

ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಭಗತ್ ಸಿಂಗ್ ಸರ್ಕಲ್, ಗಂಜ್ ವೃತ್ತ, ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಅನಗತ್ಯ ಹೊರಬಂದವರಿಗೆ ಲಾಠಿ ಬಿಸಿ ಮುಟ್ಟಿಸಿದ್ದಾರೆ.

ತುಮಕೂರು ನಗರದ ಬಿ.ಎಚ್.ರಸ್ತೆ ಮತ್ತು ಅಶೋಕ ರಸ್ತೆಯಲ್ಲಿಯೂ ಲಾಠಿಚಾರ್ಜ್‌ ನಡೆದಿದೆ. ಹುಬ್ಬಳ್ಳಿಯ ಚನ್ನಮ್ಮ ವೃತ್ತ, ದುರ್ಗದ ಬೈಲ್ ಮುಂತಾದ ಪ್ರದೇಶಗಳಲ್ಲಿ ವಾಹನಗಳಲ್ಲಿ ತಿರುಗಾಡುತ್ತಿದ್ದ ಕೆಲವರು ಪೊಲೀಸರ ಏಟು ತಿನ್ನಬೇಕಾಯಿತು.

ಚಿತ್ರದುರ್ಗ ಮಾರುಕಟ್ಟೆಯಲ್ಲಿ ಸೇರಿದ್ದ ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಲಾಠಿ ಬೀಸಿದ್ದರೆ, ದಾವಣಗೆರೆಯಲ್ಲಿ ಮಾಸ್ಕ್ ಇಲ್ಲದೇ ಹೊರ ಬಂದವರಿಗೆ ಎಚ್ಚರಿಕೆ ನೀಡಲಾಯಿತು.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಿಯಮ ಉಲ್ಲಂಘಿಸಿ ಹೊರಬಂದ ವಾಹನ ಸವಾರರಿಗೆ ಪೊಲೀಸರು ಲಾಠಿ ಬೀಸಿದ್ದಾರೆ.

ಶಿರಸಿಯಲ್ಲಿ ಪ್ರತಿ ವೃತ್ತದಲ್ಲಿ ಪೊಲೀಸರು ನಿಂತು ಸಾರ್ವಜನಿಕ ಸಂಚಾರದ ಮೇಲೆ ನಿಗಾ ವಹಿಸಿದ್ದಾರೆ. ವಾಹನ ಸಂಚಾರ ತೀರಾ ವಿರಳವಾಗಿತ್ತು. ಬೈಕ್‌ನಲ್ಲಿ ಓಡಾಡುತ್ತಿದ್ದ ಯುವಕರಿಗೆ ಪೊಲೀಸರಿಂದ ಲಾಠಿಯೇಟು ಬಿದ್ದಿದೆ.

ರಾಮನಗರದ ಮುಖ್ಯ ರಸ್ತೆಗಳಲ್ಲಿ ಪದೇ ಪದೇ ಬೈಕಿನಲ್ಲಿ ಓಡಾಡುತ್ತಿದ್ದ ಕೆಲ ಯುವಕರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಚೆಕ್ ಪೋಸ್ಟ್‌ಗಳಲ್ಲಿ ನಿಗಾ ವಹಿಸಿದ್ದು, ಅನಗತ್ಯವಾಗಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಹೇರಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ‌ಹಾಗೂ‌ ಸೋಮವಾರಪೇಟೆಯಲ್ಲಿ‌ ಅನಗತ್ಯವಾಗಿ ಬೈಕ್ ಹಾಗೂ ಕಾರಿನಲ್ಲಿ ಓಡಾಟ ನಡೆಸುತ್ತಿದ್ದವರಿಗೆ ಪೊಲೀಸರು ಲಾಠಿ ತೋರಿಸಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಅನವಶ್ಯಕವಾಗಿ ಹೊರಗಡೆ ತಿರುಗುವವರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಹೊಸಪೇಟೆಯಲ್ಲಿಯೂ ಲಾಠಿಚಾರ್ಜ್ ಮಾಡಲಾಗಿದೆ.

ಹಾಸನದಲ್ಲಿ ಮಾಸ್ಕ್‌ ಧರಿಸದೆ ಹೊರ ಬಂದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.