ADVERTISEMENT

ದಟ್ಟಣೆ ಕಾರಿಡಾರ್‌: ಮರು ಟೆಂಡರ್‌ ಕೂಡ ಸ್ಥಗಿತ?

ಕೆಆರ್‌ಡಿಸಿಎಲ್‌ ಕ್ರಮಕ್ಕೆ ಮುಖ್ಯಮಂತ್ರಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 19:43 IST
Last Updated 3 ಫೆಬ್ರುವರಿ 2022, 19:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಗರದ 12 ಅತಿ ದಟ್ಟಣೆ ಕಾರಿಡಾರ್‌ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಇತ್ತೀಚೆಗೆ ಮತ್ತೆ ಕರೆದಿರುವ ಅಲ್ಪಾವಧಿ ಮರು ಟೆಂಡರ್ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಬುಧವಾರ (ಫೆ.2)ಟಿಪ್ಪಣಿ ಕಳುಹಿಸಿರುವ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌.ಅನಿಲ್‌ ಕುಮಾರ್‌, ‘ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಆರ್‌ಡಿಸಿಎಲ್‌ ನಿರ್ವಹಿಸುತ್ತಿರುವ ಈ ಕಾರಿಡಾರ್‌ಗಳ ಟೆಂಡರ್‌ ಬಗ್ಗೆಯೂ ಮುಖ್ಯಮಂತ್ರಿ ಪರಿಶೀಲಿಸಿದ್ದರು.’

‘ಈ ರಸ್ತೆಗಳ ಅಭಿವೃದ್ಧಿಗೆ ತಗಲುವ ವೆಚ್ಚಕ್ಕಿಂತಲೂ ಅವುಗಳನ್ನು ಐದು ವರ್ಷಗಳ ನಿರ್ವಹಿಸುವುದಕ್ಕೆ ತಗಲುವ ವೆಚ್ಚ ಹೆಚ್ಚು ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲವು ನಿರ್ದಿಷ್ಟ ಲೋಪಗಳ ಕಾರಣಕ್ಕೆ ಈ ಹಿಂದಿನ ಟೆಂಡರ್‌ ರದ್ದುಪಡಿಸಲಾಗಿತ್ತು. ಮರು ಟೆಂಡರ್‌ ಕರೆಯುವಾಗ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು.’

ADVERTISEMENT

‘ಟೆಂಡರ್‌ನ ಕೆಲವು ಅಂಶಗಳನ್ನು ಮಾರ್ಪಾಡು ಮಾಡಿ ಮರು ಟೆಂಡರ್‌ ಕರೆಯಲಾಗಿದೆ ಎಂದು ಸಭೆಯಲ್ಲಿ ಕೆಆರ್‌ಡಿಸಿಎಲ್‌ ತಿಳಿಸಿತ್ತು. ಅದರೆ, ಟೆಂಡರ್‌ ರದ್ದುಪಡಿಸುವಾಗ ಯಾವೆಲ್ಲ ಅಂಶಗಳಿಗೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತೋ, ಅವುಗಳೆಲ್ಲವನ್ನು ಮರು ಟೆಂಡರ್‌ನಲ್ಲಿ ಸರಿಪಡಿಸಿಲ್ಲ. ಹಾಗಾಗಿ 12 ಅತಿ ದಟ್ಟಣೆ ಕಾರಿಡಾರ್‌ಗಳ ಟೆಂಡರ್‌ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು’ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.

‘ಈ ಬಗ್ಗೆ ಅನುಸರಣಾ ವರದಿ ಸಲ್ಲಿಸಬೇಕು. ಈ ಹಿಂದೆ ಟೆಂಡರ್‌ ರದ್ದುಪಡಿಸಲು ಕಾರಣವಾಗಿದ್ದ ಅಂಶಗಳನ್ನು ಗುರುತಿಸಿ ಅವುಗಳನ್ನು ಮಾರ್ಪಾಡುಗಳನ್ನು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಈ ಟೆಂಡರ್‌ ಪ್ರಕ್ರಿಯೆಯ ಎಲ್ಲ ಕಡತಗಳನ್ನೂ ಸಲ್ಲಿಸಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ.

’ಇಲಾಖೆಯು ಈ ಹಿಂದೆ ಕ‍ಪ್ಪುಪಟ್ಟಿಗೆ ಸೇರಿಸಿದ್ದ ಗುತ್ತಿಗೆದಾರರಿಗೆ ಒಂದು ಪ್ಯಾಕೇಜ್‌ನ ಕಾಮಗಾರಿ ನೀಡಲು ಮುಂದಾಗಿರುವ ನಿಗಮದ ನಡೆಗೂ ಮುಖ್ಯಮಂತ್ರಿ ಅವರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು‘ ಎಂದು ಗೊತ್ತಾಗಿದೆ.

ನಗರದಲ್ಲಿ ಒಟ್ಟು 191 ಕಿ.ಮೀ ಉದ್ದದ ಕಾರಿಡಾರ್‌ಗಳ ನಿರ್ವಹಣೆಯ ಹೊಣೆಯನ್ನು ಬಿಬಿಎಂಪಿಯ ಬದಲು ಕೆಆರ್‌ಡಿಸಿಎಲ್‌ಗೆ ರಾಜ್ಯ ಸರ್ಕಾರ ವಹಿಸಿದೆ. ಈ ಕಾರಿಡಾರ್‌ಗಳ ಉನ್ನತೀಕರಣಕ್ಕೆ ಒಟ್ಟು ₹ 335.17 ಕೋಟಿ, ದೈನಂದಿನ ನಿರ್ವಹಣೆಗೆ ಮೊದಲ ವರ್ಷಕ್ಕೆ ₹ 142.12 ಕೋಟಿ, ಇನ್ನುಳಿದ ನಾಲ್ಕು ವರ್ಷಗಳ ನಿರ್ವಹಣೆಗೆ ₹ 643.19 ಕೋಟಿ ವೆಚ್ಚವಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜಿಸಿತ್ತು. ಈ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತ ನಾಲ್ಕು ಪ್ಯಾಕೇಜ್‌ಗಳೂ ಸೇರಿ ಒಟ್ಟು ₹1,120.48 ಕೋಟಿ ವೆಚ್ಚದ ಟೆಂಡರ್‌ಗಳನ್ನು ನಿಗಮ ಈ ಹಿಂದೆ ಅಂತಿಮಗೊಳಿಸಿತ್ತು.

ಈ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ದುಬಾರಿ ವೆಚ್ಚ ಮಾಡುವುದು, ವೈಟ್‌ಟಾಪಿಂಗ್‌ ಮಾಡಲಾದ ರಸ್ತೆಗಳ ನಿರ್ವಹಣೆಗೂ (ಒಟ್ಟು 191 ಕಿ.ಮೀ ರಸ್ತೆಯಲ್ಲಿ 53.42 ಕಿ.ಮೀ ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲಾಗಿದೆ) ದುಬಾರಿ ವೆಚ್ಚ ಮಾಡುತ್ತಿರುವುದು, ಕಾಮಗಾರಿಯ ನಿರ್ವಹಿಸಿದ ಗುತ್ತಿಗೆದಾರರು ಕನಿಷ್ಠ ಪಕ್ಷ ಆರಂಭಿಕ ಎರಡು ವರ್ಷ ಕಾಲ (ದೋಷ ಬಾಧ್ಯತಾ ಅವಧಿ) ರಸ್ತೆಗಳ ನಿರ್ವಹಣೆ ಮಾಡುವ ಉತ್ತರದಾಯಿತ್ವ ಹೊಂದಿದ್ದರೂ ಮತ್ತೆ ಅವರಿಗೆ ನಿರ್ವಹಣೆ ವೆಚ್ಚ ಭರಿಸುವುದೂ ಸೇರಿದಂತೆ ಈ ಟೆಂಡರ್‌ನ ಅನೇಕ ಲೋಪಗಳ ಬಗ್ಗೆ ‍‘ಪ್ರಜಾವಾಣಿ’ ಸರಣಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿತ್ತು.

ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಯವರು ಕೆಆರ್‌ಡಿಸಿಎಲ್‌ನಿಂದ ವಿವರಣೆ ಕೇಳಿದ್ದರು. ನಿಗಮವು ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಬಳಿಕ ಮುಖ್ಯಮಂತ್ರಿಯವರು ಹಳೆಯ ಟೆಂಡರ್‌ ರದ್ದುಪಡಿಸಿ ಅಲ್ಪಾವಧಿಯ ಮರು ಟೆಂಡರ್‌ ಕರೆಯಬೇಕು ಎಂದು ಸೂಚನೆ ನೀಡಿದ್ದರು.

ಟೆಂಡರ್‌ ರದ್ದುಪಡಿಸುವುದಕ್ಕೆ ಸರ್ಕಾರ ನೀಡಿದ್ದ ಕಾರಣಗಳು:

l ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ ಬಳಿಕ ಎರಡು ವರ್ಷಗಳುಅದರ ನಿರ್ವಹಣೆಯನ್ನೂ ಮಾಡಬೇಕು. ಆದರೂ ಮೊದಲ ಎರಡುವರ್ಷಗಳ ನಿರ್ವಹಣೆಗೆ ₹ 291 ಕೋಟಿ ವೆಚ್ಚ ನಿಗದಿಪಡಿಸಿದ್ದು ಸಮಂಜಸವಲ್ಲ.

l ಗುತ್ತಿಗೆದಾರ ಉದಯ್‌ ಶಿವಕುಮಾರ್‌ ₹ 60 ಕೋಟಿ ವೆಚ್ಚದ ಒಂದೂ ಕಾಮಗಾರಿಯನ್ನೂ ಕೈಗೊಂಡಿಲ್ಲ. ಕಾಮಗಾರಿ ಗುತ್ತಿಗೆ ನಿರ್ವಹಿಸುವವರು ₹ 80 ಕೋಟಿ ವೆಚ್ಚದ ಒಂದು ಕಾಮಗಾರಿಯನ್ನಾದರೂ ನಡೆಸಬೇಕೆಂಬ ಷರತ್ತಿರುವುದರಿಂದ ಅವರಿಗೆ ಕಾಮಗಾರಿಯ ಗುತ್ತಿಗೆ ನೀಡಿದ್ದು ಸರಿಯಲ್ಲ.

l ಕೆಆರ್‌ಡಿಸಿಎಲ್‌ ವಾಸ್ತವದಲ್ಲಿ 67 ಕಿ.ಮೀ ಉದ್ದದ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸುತ್ತಿದ್ದರೂ ಟೆಂಡರ್‌ನಲ್ಲಿ 191 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಎಂದು ತೋರಿಸಿದ್ದು ಸರಿಯಲ್ಲ.

l 53.42 ಕಿ.ಮೀ ಉದ್ದದ ರಸ್ತೆ ವೈಟ್‌ಟಾಪಿಂಗ್‌ ಆಗಿದ್ದರೂ ಅದಕ್ಕೆ ನಿರ್ವಹಣೆಗೆ ದುಬಾರಿ ವೆಚ್ಚವನ್ನು ನಿಗದಿಪಡಿಸಿದ್ದು ಸೂಕ್ತವಲ್ಲ.

l ಹೆಬ್ಬಾಳ– ಕೆ.ಆರ್‌.ಪುರ ನಡುವೆ ಮೆಟ್ರೊ ಕಾಮಗಾರಿ ನಡೆಯಬೇಕಿರುವುದರಿಂದ ಈ ಹಂತದಲ್ಲಿ ಕೆಆರ್‌ಡಿಸಿಎಲ್‌ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.