ADVERTISEMENT

‘ಲಂಚ ಪ್ರಕರಣ’: ಸಚಿವ ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್‌

ಟೈಪಿಸ್ಟ್‌ ಬಳಿ ಸಿಕ್ಕಿದ ₹ 25.76 ಲಕ್ಷ ಲಂಚದ ಹಣ ಪ್ರಕರಣ: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ಸಚಿವ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 13:04 IST
Last Updated 14 ಫೆಬ್ರುವರಿ 2019, 13:04 IST
   

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯದ ಟೈಪಿಸ್ಟ್‌ ಎಸ್‌.ಜೆ. ಮೋಹನ್‌ ಕುಮಾರ್‌ ಬಳಿ ಸಿಕ್ಕಿರುವ ₹ 25. 76 ಲಕ್ಷ ‘ಲಂಚದ ಹಣ ಪ್ರಕರಣ’ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ನೋಟಿಸ್‌ ಜಾರಿಗೊಳಿಸಿದ್ದಾರೆ.

ಇದರಿಂದಾಗಿ ರಾಜ್ಯದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಮತ್ತೊಂದು ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನೋಟಿಸ್ ಸ್ವೀಕರಿಸಿರುವ ಪುಟ್ಟರಂಗಶೆಟ್ಟಿ ಅವರು ವೈಯಕ್ತಿಕ ಕಾರಣಗಳಿಂದಾಗಿ ನೀವು ಹೇಳಿದ ಸಮಯಕ್ಕೆ ಹಾಜರಾಗಲು ಸಾಧ್ಯವಾಗದೆ ಇರುವುದರಿಂದ ಕೊಂಚ ಕಾಲಾವಕಾಶ ನೀಡಬೇಕೆಂದು ಎಸಿಬಿಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೋಹನ್‌ ಕುಮಾರ್‌, ತನಿಖಾಧಿಕಾರಿಗಳಿಗೆ ನೀಡಿರುವ ಹೇಳಿಕೆಯಲ್ಲಿ, ‘ಈ ಹಣವನ್ನುಸಚಿವರಿಗೆ ತಲುಪಿಸಲು ಗುತ್ತಿಗೆದಾರರಾದ ನಂದ, ಅನಂತು, ಶ್ರೀನಿಧಿ ಹಾಗೂ ಕೃಷ್ಣಮೂರ್ತಿ ಅವರು ಕೊಟ್ಟಿದ್ದರು’ ಎಂದು ಹೇಳಿದ್ದರು.

ADVERTISEMENT

ಆರೋ‍ಪಿ ಹೇಳಿಕೆ ಹಿನ್ನೆಲೆಯಲ್ಲಿ ನಂದ, ಅನಂತು ಹಾಗೂ ಕೃಷ್ಣಮೂರ್ತಿ ಅವರನ್ನು ಪ್ರಶ್ನಿಸಲಾಗಿತ್ತು. ‘ಅಲೆಮಾರಿ ನಿಗಮದಿಂದ ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಲು ಯೋಗೀಶ್‌ಬಾಬು, ಸತೀಶ್‌, ಜ್ಯೋತಿ ಪ್ರಕಾಶ್‌, ಉಮೇಶ್‌ ಮತ್ತು ರಾಜು ಎಂಬುವವರು ಸಚಿವರಿಗೆ ಹಣ ನೀಡಿದ್ದರು. ಅದನ್ನು ಮೋಹನ್‌ ಕುಮಾರ್‌ಗೆ ತಲುಪಿಸಲಾಗಿತ್ತು’ ಎಂದೂ ಖಚಿತಪಡಿಸಿದ್ದರು.

ಎಸಿಬಿ ಅಧಿಕಾರಿಗಳು ಅಲೆಮಾರಿ ನಿಗಮದ ಅಧಿಕಾರಿಗಳಿಂದಲೂ ಹೇಳಿಕೆ ಪಡೆದಿದ್ದಾರೆ. ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ, ಅಲೆಮಾರಿ ಅಭಿವೃದ್ಧಿ ನಿಗಮ, ಮೋಹನ್‌ ಕುಮಾರ್‌ ಮನೆ ಸೇರಿದಂತೆ ಹಲವು ಸ್ಥಳಗಳನ್ನು ಶೋಧಿಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಚಿವರ ಕಚೇರಿಯಿಂದ ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ.

ಎಲ್ಲ ಮೂಲಗಳಿಂದಲೂ ಅಗತ್ಯ ಸಾಕ್ಷ್ಯಾಧಾರಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿದ ಬಳಿಕ ಸಚಿವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಮುಂದೆ ವಿಚಾರಣೆಗೆ ಹಾಜರಾಗುತ್ತಿರುವ ಮೈತ್ರಿ ಸರ್ಕಾರದ ಮೊದಲ ಸಚಿವ ಪುಟ್ಟರಂಗಶೆಟ್ಟಿ ಅಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಅವರು ಸಿಗಲಿಲ್ಲ.

ಎಸಿಬಿ ವಿಶ್ವಾಸಾರ್ಹತೆಯ ಅಗ್ನಿಪರೀಕ್ಷೆ

ಆಡಿಯೊ ‍ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವುದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿರುವ ಬೆನ್ನಲ್ಲೇ, ‘ಪುಟ್ಟರಂಗಶೆಟ್ಟಿ ಪ್ರಕರಣವನ್ನು ಎಸಿಬಿ ಹೇಗೆ ನಿಭಾಯಿಸಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆಯೇ?’ ಎಂಬ ಪ್ರಶ್ನೆ ಎದ್ದಿದೆ.

ಮುಖ್ಯಮಂತ್ರಿ ನಿಯಂತ್ರಣದಲ್ಲಿ ಎಸ್‌ಐಟಿ ತನಿಖೆ ನಡೆಸುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಗೃಹ ಇಲಾಖೆ ಅಧೀನದಲ್ಲಿ ಎಸಿಬಿ ಕೆಲಸ ಮಾಡುವುದರಿಂದ ಈ ಪ್ರಕರಣದಲ್ಲಿ ಸತ್ಯ ಹೊರಬರುವುದೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಎಸಿಬಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೆ ಈ ಪ್ರಕರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವರೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.