ADVERTISEMENT

ಮೈಸೂರು: ಲಂಚವಿಲ್ಲದೆ ಮುಡಾ, ಪಾಲಿಕೆಯಲ್ಲಿ ಕೆಲಸ ಆಗಲ್ಲ

ನವೀನ್ ಕುಮಾರ್‌ ಎನ್.
Published 5 ಜೂನ್ 2022, 19:49 IST
Last Updated 5 ಜೂನ್ 2022, 19:49 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ   

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬಡಾವಣೆ ನಿರ್ಮಾಣ, ನಕ್ಷೆ ಮಂಜೂರಾತಿ, ಖಾತೆ ಮಾಡಿಸಿಕೊಳ್ಳಬೇಕಾದರೆ ಅಧಿಕಾರಿಗಳಿಗೆ ‘ಲಂಚ’ ಕೊಡಲೇಬೇಕು. ಲಂಚ ಕೊಟ್ಟರೂ ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ದಾಟಬೇಕಾದರೆ ಕನಿಷ್ಠ ಎರಡು ತಿಂಗಳಾದರೂ ಬೇಕು. ಅಧಿಕಾರಿಗಳ ಈ ವಿಳಂಬ ಧೋರಣೆಯಿಂದಾಗಿ ಡೆವೆಲಪರ್‌ಗಳು ಹಾಗೂ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.

‘ಕೆಲಸದ ಸ್ವರೂಪ, ಆಸ್ತಿ ಮೌಲ್ಯ ಹಾಗೂ ವ್ಯಕ್ತಿಯನ್ನು ಆಧರಿಸಿ ಲಂಚದ ಪ್ರಮಾಣನಿರ್ಧಾರವಾಗುತ್ತದೆ. ಅಧಿಕಾರಿಗಳು ₹ 1 ಲಕ್ಷದಿಂದ ₹ 10 ಲಕ್ಷದವರೆಗೆ ಲಂಚ ಕೇಳುತ್ತಾರೆ’ ಎಂಬ ಆರೋಪಗಳಿವೆ.

ನಿವೃತ್ತಿಗೆ ನಾಲ್ಕು ದಿನ ಮುಂಚಿತವಾಗಿ ಲಂಚ ಪಡೆಯುತ್ತಿದ್ದಾಗಲೇ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಶಾಖೆಯ ಸದಸ್ಯ, ಜಂಟಿ ನಿರ್ದೇಶಕ ಜಿ.ಎಸ್.ಜಯಸಿಂಹ ಹಾಗೂ ಡೇಟಾ ಎಂಟ್ರಿ ಆಪರೇಟರ್ ನಾಗೇಂದ್ರಸ್ವಾಮಿ ಮೇ 27ರಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರ ಬಲೆಗೆ ಬಿದ್ದಿದ್ದರು.

ADVERTISEMENT

ಬೆಂಗಳೂರಿನ ನಿವಾಸಿಯೊಬ್ಬರು ಇಲ್ಲಿನ ಶ್ರೀರಾಂಪುರದಲ್ಲಿ 4 ಎಕರೆ 20 ಗುಂಟೆ ಜಮೀನು ಖರೀದಿಸಿದ್ದರು. ಅಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕಾಗಿ ನಕಾಶೆಗೆ ಅನುಮೋದನೆ ನೀಡಲು ಆರೋಪಿಗಳು ₹3 ಲಕ್ಷ ಲಂಚಕ್ಕೆ ಆಗ್ರಹಿಸಿ, ₹ 1 ಲಕ್ಷವನ್ನು ಮುಂಗಡವಾಗಿ ಪಡೆದಿದ್ದರು. ಮತ್ತೆ ₹ 1 ಲಕ್ಷಕ್ಕೆ ಬೇಡಿಕೆ ಇಟ್ಟು, ₹ 50 ಸಾವಿರ ಪಡೆಯುವಾಗ ಜಯಸಿಂಹ ಅವರನ್ನು ಬಂಧಿಸಿದ್ದರು.

ಮೈಸೂರು ಮಹಾನಗರ ಪಾಲಿಕೆಯಲ್ಲೂ ಲಂಚಾವತಾರ ತಾಂಡವವಾಡುತ್ತಿದೆ. ಪಾಲಿಕೆ ವಲಯ ಕಚೇರಿ–4ರ ಕಿರಿಯ ಎಂಜಿನಿಯರ್‌ ಗುರುಸಿದ್ದಯ್ಯ ಎಂಬುವರು ಹೊಸ ಕಟ್ಟಡ ನಿರ್ಮಿಸುವ ಸಂಬಂಧ ಯೋಜನೆ ಮಂಜೂರಾತಿಗಾಗಿ ಮಹಿಳೆಯೊಬ್ಬರಿಂದ ₹ 6 ಸಾವಿರಕ್ಕೆ ಬೇಡಿಕೆ ಇಟ್ಟು, ₹3 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ಇತ್ತೀಚೆಗೆ ಸಿಕ್ಕಿ ಬಿದ್ದಿದ್ದರು.

‘30x40 ನಿವೇಶನಗಳಿಗೆ ವಲಯ ಕಚೇರಿಯ ಉಪ ಆಯುಕ್ತರೇ ಸ್ಥಳ ಪರಿಶೀಲಿಸಿ ಪ್ಲಾನ್‌ ಅನುಮೋದನೆ ನೀಡುತ್ತಾರೆ. ಅಲ್ಲಿ ₹5 ಸಾವಿರದಿಂದ ₹15 ಸಾವಿರವರೆಗೆ ಲಂಚ ನೀಡಬೇಕು. 40x60 ಅಡಿ ಮೇಲ್ಪಟ್ಟ ನಿವೇಶನಗಳಿಗೆ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರು (ನಗರ ಯೋಜನೆ) ಅನುಮೋದನೆ ನೀಡುತ್ತಾರೆ. ಅವರು ಸ್ಥಳ ಪರಿಶೀಲನೆಗೆ ಬಾರದೆ ವಿಳಂಬ ಮಾಡುತ್ತಾರೆ. ವಿನಾ ಕಾರಣ ಅಲೆದಾಡಿಸುತ್ತಾರೆ. ಕೆಳಗಿನ ಅಧಿಕಾರಿಗಳ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಾರೆ. ₹50 ಸಾವಿರದಿಂದ ₹1 ಲಕ್ಷದವರೆಗೂ ಲಂಚ ನೀಡಬೇಕು’ ಎಂದು ಮಾಜಿ ಮೇಯರ್‌ ಎಚ್‌.ಎನ್‌.ಶ್ರೀಕಂಠಯ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.