ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಪ್ರಜಾವಾಣಿ ವಾರ್ತೆ
ಹಾಸನ: ‘ರಾಜ್ಯದಲ್ಲಿ ಮಾರಾಟ ಆಗುತ್ತಿರುವ ಕೆಮ್ಮಿನ ಸಿರಪ್‌ನ ಗುಣಮಟ್ಟ ಕಳಪೆ ಆಗಿರುವುದರ ಮಾಹಿತಿ ಬಂದಿದ್ದು, ತಪಾಸಣೆಗೆ ಮಾದರಿಯನ್ನು ಕಳುಹಿಸಲಾಗಿದೆ. ಇಲಾಖೆ ಅಗತ್ಯ ಎಚ್ಚರಿಕೆ ವಹಿಸಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಮ್ಮಿನ ಸಿರಪ್ ಕುರಿತು ಸಾರ್ವಜನಿಕರು ವಹಿಸಬೇಕಾದ ಜಾಗ್ರತೆ ಕುರಿತು ಮಾರ್ಗಸೂಚಿ ನೀಡಲಾಗುತ್ತದೆ’ ಎಂದರು.
‘ಕೆಮ್ಮಿನ ಭಿನ್ನ ಸಿರಪ್‌ಗಳ ಮಾದರಿಗಳ ಸಂಗ್ರಹಿಸಿ ತಪಾಸಣೆ ನಡೆದಿದೆ. ಶೀಘ್ರ ವರದಿ ಬರಲಿದೆ. ರಾಜ್ಯದಲ್ಲಿ ಯಾವುದೇ ಅಸುರಕ್ಷಿತ ಸಿರಪ್ ಮಾರುಕಟ್ಟೆಗೆ ಬಾರದಂತೆ ಕ್ರಮಕೈಗೊಳ್ಳುತ್ತಿದ್ದೇವೆ’ ಎಂದರು.
‘ಔಷಧಗಳ ವ್ಯವಹಾರದಲ್ಲಿ ಪಾರದರ್ಶಕತೆ ತರಲು ಕೇಂದ್ರಕ್ಕೂ ಪತ್ರ ಬರೆಯಲಾಗಿದೆ. ಸಿರಪ್ ತಯಾರಿಕಾ ಘಟಕಗಳು ಮತ್ತು ಸರಬರಾಜುದಾರರ ಸಂವಹನದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಇಂಥ ಅವಘಡ ನಡೆಯುತ್ತಿವೆ’ ಎಂದರು.
‘ಮಧ್ಯಪ್ರದೇಶದಲ್ಲಿ ಬಳಕೆಯಾದ ಕೆಮ್ಮಿನ ಸಿರಪ್ ರಾಜ್ಯದಲ್ಲಿ ಸರಬರಾಜಾಗಿಲ್ಲ. ತಮಿಳುನಾಡು ಸೇರಿ ವಿವಿಧೆಡೆ ಬಳಸಿರುವ ಮಾಹಿತಿ ಇದೆ. ಈ ಸಿರಪ್‌ಗಳಲ್ಲಿ ಡೈ ಎಥಿಲಿನ್ ಗ್ಲೈಕಾಲ್ ಎಂಬ ಹಾನಿಕರ ರಾಸಾಯನಿಕ ಅಂಶ ಬಳಕೆಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.