ADVERTISEMENT

ಡಿಸೆಂಬರ್‌ 15ರ ಘಟನೆ: ಮೇಲ್ಮನೆ ಗದ್ದಲ ತನಿಖೆಗೆ ಸದನ ಸಮಿತಿ

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭಾಪತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:00 IST
Last Updated 29 ಡಿಸೆಂಬರ್ 2020, 20:00 IST
ವಿಧಾನ ಪರಿಷತ್‌ ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಪತಿ ಧರ್ಮೇಗೌಡ ಅವರನ್ನು ಕಾಂಗ್ರೆಸ್‌ ಪಕ್ಷದ ಸದಸ್ಯರು ಪೀಠದಿಂದ ಕೆಳಗಿಳಿಸಲು ಯತ್ನಿಸಿದಾಗ ಬಿಜೆಪಿ ಸದಸ್ಯರು ಅವರನ್ನು ಮತ್ತೆ ಪೀಠದೆಡೆಗೆ ಎಳೆದು ಕುಳ್ಳಿರಿಸಲು ಪ್ರಯತ್ನಿಸಿದ್ದರು.
ವಿಧಾನ ಪರಿಷತ್‌ ಸಭಾಪತಿ ಪೀಠದಲ್ಲಿ ಆಸೀನರಾಗಿದ್ದ ಉಪ ಸಭಾಪತಿ ಧರ್ಮೇಗೌಡ ಅವರನ್ನು ಕಾಂಗ್ರೆಸ್‌ ಪಕ್ಷದ ಸದಸ್ಯರು ಪೀಠದಿಂದ ಕೆಳಗಿಳಿಸಲು ಯತ್ನಿಸಿದಾಗ ಬಿಜೆಪಿ ಸದಸ್ಯರು ಅವರನ್ನು ಮತ್ತೆ ಪೀಠದೆಡೆಗೆ ಎಳೆದು ಕುಳ್ಳಿರಿಸಲು ಪ್ರಯತ್ನಿಸಿದ್ದರು.   

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಡಿಸೆಂಬರ್‌ 15ರಂದು ನಡೆದ ಗದ್ದಲದ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸಲು ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಸಭಾಪತಿ ಹಾಜರಿದ್ದರೂ ಉಪ ಸಭಾಪತಿ ಪೀಠ ಏರಿ ಕುಳಿತದ್ದು, ಕಾಂಗ್ರೆಸ್‌ ಸದಸ್ಯರು ಉಪ ಸಭಾಪತಿಯವರನ್ನು ಪೀಠದಿಂದ ಕೆಳಗೆ ಎಳೆದು ಹಾಕಿದ್ದು, ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಪರಸ್ಪರ ತಳ್ಳಾಟ, ನೂಕಾಟ, ಘರ್ಷಣೆಯಲ್ಲಿ ನಿರತರಾದ ಘಟನೆ ಕುರಿತು ಸದನ ಸಮಿತಿಯಿಂದ ವಿಚಾರಣೆ ನಡೆಸಲು ಸಭಾಪತಿ ನಿರ್ಧರಿಸಿದ್ದಾರೆ.

‘ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯಲ್ಲಿ ಮೂರೂ ಪಕ್ಷಗಳ ಸದಸ್ಯರನ್ನು ಒಳಗೊಂಡ ಸದನ ಸಮಿತಿ ರಚಿಸಿ ಆದೇಶ ಹೊರಡಿಸಬೇಕು’ ಎಂದು ಪರಿಷತ್‌ ಕಾರ್ಯದರ್ಶಿ ಕೆ.ಆರ್‌.ಮಹಾಲಕ್ಷ್ಮಿ ಅವರಿಗೆ ಸೂಚಿಸಿದ್ದಾರೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಾಲಕ್ಷ್ಮಿ, ‘ಸದನ ಸಮಿತಿ ರಚನೆಯ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಆದೇಶ ಪ್ರಕಟವಾದ ಬಳಿಕ ಅದನ್ನು ಸದನದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದರು.

ಡಿ.15 ರಂದು ನಡೆದ ಅಧಿವೇಶನದಲ್ಲಿ ಕರ್ತವ್ಯಲೋಪ ಎಸಗಿರುವುದು ಮತ್ತು ಅಧಿಕಾರ ವ್ಯಾಪ್ತಿ ಮೀರಿ ನಡೆದುಕೊಂಡಿರುವ ಆರೋಪದ ಮೇಲೆ ಮಹಾಲಕ್ಷ್ಮಿ ಅವರಿಗೆ ಸಭಾಪತಿ ಶೋಕಾಸ್‌ ನೋಟಿಸ್‌ ನೀಡಿದ್ದರು. ಅದಕ್ಕೆ ಉತ್ತರ ನೀಡಿದ್ದ ಕಾರ್ಯದರ್ಶಿ, ತಾವು ತಪ್ಪೆಸಗಿಲ್ಲ ಎಂದು ತಿಳಿಸಿದ್ದರು. ಉಪ ಸಭಾಪತಿ ಎಸ್‌.ಎಲ್. ಧರ್ಮೇಗೌಡ ಅವರು ತಾವಾಗಿಯೇ ಸಭಾಪತಿ ಪೀಠ ಏರಿ ಕುಳಿತಿದ್ದರು ಎಂದು ಉತ್ತರದಲ್ಲಿ ತಿಳಿಸಿದ್ದರು. ಕಾರ್ಯದರ್ಶಿಯವರ ಉತ್ತರ ತೃಪ್ತಿಕರವಾಗಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಭಾಪತಿ, ಸದನ ಸಮಿತಿಯ
ಮೂಲಕ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

**
ಧರ್ಮೇಗೌಡರ ನಿಧನ ಇಡೀ ನಾಡಿನ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಅವರ ನಿಧನ ನನಗೆ ಆಘಾತ ತಂದಿದೆ.
-ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

*
ಮೇಲ್ಮನೆಯ ಸಂಘರ್ಷದಲ್ಲಿ ನೀವು ಬಲಿಪಶು ಆಗಬೇಡಿ ಎಂದು ಸಲಹೆ ನೀಡಿದ್ದೆ. ಸಭಾಪತಿಯ ಸ್ಥಾನಕ್ಕೆ ಕರೆದು ಕೂರಿಸಿದರೆ ಮಾತ್ರ ಒಪ್ಪಿಕೊಳ್ಳುವಂತೆ ತಿಳಿಸಿದ್ದೆ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

*
ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಲು ಧರ್ಮೇಗೌಡರಿಗೆ ಇಷ್ಟವಿರಲಿಲ್ಲ. ಬಿಜೆಪಿ, ಜೆಡಿಎಸ್‌ನವರು ಬಲವಂತದಿಂದ ಕೂರಿಸಿದ್ದರು. ಕುಮಾರಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧಪಕ್ಷದ ನಾಯಕ

*
ಧರ್ಮೇಗೌಡರ ಸಾವಿನ ಸಂಗತಿ ನಂಬಲಾಗುತ್ತಿಲ್ಲ. ಇದು, ವೈಯಕ್ತಿಕ ಅಥವಾ ರಾಜಕೀಯ ಕಾರಣದಿಂದ ನಡೆದಿದೆಯೋ ಗೊತ್ತಿಲ್ಲ. ಅವರ ಕುಟುಂಬಕ್ಕೆ ದೊಡ್ಡ ಅನ್ಯಾಯವಾಗಿದೆ.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.