
ಬೆಂಗಳೂರು: ‘ರಾಜ್ಯದ ಮ್ಯಾಜಿಸ್ಟ್ರೇಟ್, ದಿವಾಣಿ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಭ್ರಷ್ಟಾಚಾರ ಅನೂಹ್ಯ ರೀತಿಯಲ್ಲಿ ಬೆಳೆಯುತ್ತಿದೆ’ ಎಂದು ಬೆಂಗಳೂರು ವಕೀಲರ ಸಂಘ (ಎಎಬಿ) ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಸಂಘವು ಇದೇ 18ರಂದು ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಠರಾವು ಅಂಗೀಕರಿಸಿದೆ. ‘ವಿಚಾರಣಾ ನ್ಯಾಯಾಲಯಗಳ ಯಾವುದೇ ನ್ಯಾಯಾಧೀಶರ ವಿರುದ್ಧ ಇಂತಹ ಆರೋಪಗಳು ಕೇಳಿಬಂದಲ್ಲಿ ಹೈಕೋರ್ಟ್ ತತ್‌ಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಬಲವಾಗಿ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಖಜಾಂಚಿ ಶ್ವೇತಾ ರವಿಶಂಕರ್ ಮತ್ತು ಹೆಚ್ಚಿನ ಸಂಖ್ಯೆಯ ಸರ್ವ ಸದಸ್ಯರು ಹಾಜರಿದ್ದ ಈ ತುರ್ತು ಸಭೆಯಲ್ಲಿ ಕ್ರಮಕ್ಕೆ ಒತ್ತಾಯಿಸಿದ ಸರ್ವಾನುಮತದ ನಿರ್ಣಯಕ್ಕೆ ಸಹಿ ಹಾಕಲಾಗಿದೆ.
* ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಎಂಟು ವಾರಗಳ ರೋಸ್ಟರ್ ಪದ್ಧತಿಯನ್ನು ಯಥಾಸ್ಥಿತಿಯಲ್ಲೇ ಮುಂದುವರಿಸಬೇಕು ಮತ್ತು ಇದನ್ನು ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವುದು ಸಲ್ಲ
* ಕರ್ನಾಟಕ ಹೈಕೋರ್ಟ್‌ಗೆ ಹೊರಗಿನ ರಾಜ್ಯಗಳ ನ್ಯಾಯಮೂರ್ತಿಗಳನ್ನು ಬೇಕಾಬಿಟ್ಟಿಯಾಗಿ ಹೇರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ನಡೆ ಇಲ್ಲಿಗೇ ಸ್ಥಗಿತಗೊಳ್ಳಬೇಕು. ವರ್ಗಾವಣೆ ನೀತಿಯಿಂದ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ಹೇಳಿಕೊಳ್ಳಲಾಗದಷ್ಟು ಅನ್ಯಾಯ ಉಂಟಾಗಿದೆ
* ಕರ್ನಾಟಕ ಹೈಕೋರ್ಟ್ ಕೊಲಿಜಿಯಂನಲ್ಲಿ ಕಡ್ಡಾಯವಾಗಿ ರಾಜ್ಯವನ್ನು ಪ್ರತಿನಿಧಿಸುವ ನ್ಯಾಯಮೂರ್ತಿ ಇರುವಂತೆ ನೋಡಿಕೊಳ್ಳಬೇಕು. ಇದು ಇಂದಿನ ಅಗತ್ಯಗಳಲ್ಲೊಂದು
* ಬಹಳ ವರ್ಷಗಳಿಂದ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಗಳಿಗೆ ವಕೀಲ ವೃಂದದಿಂದ ವಕೀಲರನ್ನು ನೇಮಕ ಮಾಡುವುದೇ ನಿಂತುಹೋಗಿದೆ. ನಿಪುಣ ಮತ್ತು ಸತ್ಯನಿಷ್ಠೆ ಹೊಂದಿರುವ ಮತ್ತು ಎಲ್ಲಾ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಮೂಲಕ ಸಮರ್ಥ ವಕೀಲರನ್ನು ಪದನ್ನೋತಿಗೆ ಶಿಫಾರಸು ಮಾಡಲು ತಡಮಾಡದೆ ಹೆಜ್ಜೆ ಇರಿಸಬೇಕು
* ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ ಸದ್ಯ 62 ಇದ್ದು, ಇದನ್ನು 100ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತಿಸಬೇಕು. ಹೆಚ್ಚುತ್ತಿರುವ ವ್ಯಾಜ್ಯಗಳ ಸಂಖ್ಯೆ ಮತ್ತು ಧಾರವಾಡ ಕಲಬುರಗಿ ಪೀಠಗಳ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು
* ಆಯಾ ದಿನದ ಕಾಸ್‌ಲಿಸ್ಟ್‌ಗಳನ್ನು ಹಿಂದಿನ ದಿನದ ರಾತ್ರಿ 9 ಅಥವಾ 9.30ಕ್ಕೆ ನವೀಕರಿಸಲಾಗುತ್ತಿದೆ. ಇದರಿಂದ ವಕೀಲರಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ವಕೀಲರ ಆರೋಗ್ಯಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ, ಅಂತಿಮ ಕಾಸ್‌ಲಿಸ್ಟ್ ಅನ್ನು 6.30ಕ್ಕೇ ನವೀಕರಣ ಮಾಡಬೇಕು. ಈ ನಿಯಮ 2026ರ ಜನವರಿಯಿಂದ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು
* ತೆರೆದ ನ್ಯಾಯಾಲಯಗಳಲ್ಲಿ ಮೆಮೊ (ಜ್ಞಾಪನಾಪತ್ರ) ಸಲ್ಲಿಸಿದರೂ ಮಾಮಲೆಗಳು (ವ್ಯಾಜ್ಯದಲ್ಲಿರುವ ಪ್ರಕರಣ) ಕಾಸ್ ಲಿಸ್ಟ್‌ಗಳಲ್ಲಿ ನಿಯುಕ್ತಿಗೊಳ್ಳುತ್ತಿಲ್ಲ. ಆದ್ದರಿಂದ, ಮೆಮೊ ಸಲ್ಲಿಸಿದ ಎಲ್ಲ ಮಾಮಲೆಗಳೂ ಪೋಸ್ಟ್ ಆಗುವಂತೆ ನೋಡಿಕೊಳ್ಳಲು ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು
‘ಕರ್ನಾಟಕ ಹೈಕೋರ್ಟ್ ವಕೀಲರು ವಿನಮ್ರ ನಡವಳಿಕೆಗೆ ದೇಶದಲ್ಲೇ ಹೆಸರುವಾಸಿ. ಆದರೆ ಕೋರ್ಟ್ ಹಾಲ್ 4ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಜಯಂತ ಬ್ಯಾನರ್ಜಿ ಹಾಗೂ 5ರಲ್ಲಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಅವರು ತೆರೆದ ನ್ಯಾಯಾಲಯದಲ್ಲಿ ವಕೀಲ ವೃಂದದ ಜೊತೆ ಕಲಾಪದಲ್ಲಿ ನಡೆದುಕೊಳ್ಳುವ ವರ್ತನೆ ಆಘಾತಕಾರಿಯಾಗಿದೆ’ ಎಂದು ಸಂಘವು ನಿರ್ಣಯದಲ್ಲಿ ವಿವರಿಸಿದೆ.
‘ಕರ್ನಾಟಕ ಹೈಕೋರ್ಟ್ ಅನ್ನು ಈಗಿರುವ ಪಾರಂಪರಿಕ ಕಟ್ಟಡದಿಂದ ರೇಸ್ ಕೋರ್ಸ್ ಅರಮನೆ ಮೈದಾನ ಅಥವಾ ಬೆಂಗಳೂರಿನ ಹೃದಯ ಭಾಗದ ಯಾವುದಾದರೂ ಪ್ರಶಸ್ತ ಜಾಗಕ್ಕೆ ಶೀಘ್ರವೇ ಸ್ಥಳಾಂತರ ಮಾಡಬೇಕು’ ಎಂದು ಸಂಘವು ನಿರ್ಣಯಿಸಿದೆ. ಈಗಿರುವ ಪುರಾತನ ಕಟ್ಟಡ ದಿನೇ ದಿನೇ ಹೆಚ್ಚುತ್ತಿರುವ ಕಾರ್ಯಭಾರಕ್ಕೆ ನಲುಗಿ ಹೋಗಿದೆ. ಆದ್ದರಿಂದ ವಾಹನಗಳ ಪಾರ್ಕಿಂಗ್‌ಗೆ ಯಥೇಚ್ಛವಾದ ಸ್ಥಳ ಹೊಂದಿದ ವಕೀಲರ ಛೇಂಬರ್‌ಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವ ವಕೀಲರು ಕಕ್ಷಿದಾರರಿಗೆ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ಕ್ಷಮತೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡುವಂತಹ ಆತ್ಯಾಧುನಿಕ ಸೌಲಭ್ಯಗಳು ಮತ್ತು ಮೂಲ ಸೌಕರ್ಯ ಅಳವಡಿಸಿಕೊಂಡ ಹೊಸ ಕಟ್ಟಡವನ್ನು ನಿರ್ಮಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.