ಶಾಸಕ ಮುನಿರತ್ನ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಅವರನ್ನು ‘ಪ್ರಣಯ ಜಾಲ’ದಲ್ಲಿ (ಹನಿಟ್ರ್ಯಾಪ್) ಸಿಲುಕಿಸಿ, ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧದ ದೂರಿನಲ್ಲಿ ಸಾಕ್ಷಿ ಕೊರತೆ ಇದೆ ಎಂದು ಸಲ್ಲಿಸಲಾದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಈ ಸಂಬಂಧ ಸಿಐಡಿ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಪ್ರಶ್ನಿಸಿ ಲಗ್ಗೆರೆ ನಾರಾಯಣಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಪುರಸ್ಕರಿಸಿ ಈ ಕುರಿತಂತೆ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ದೂರುದಾರರ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ಲಗ್ಗೆರೆ ನಾರಾಯಣ ಸ್ವಾಮಿ ಮತ್ತು ಅವರ ಪತ್ನಿಯ ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಿಸಿ ನನಗೆ ನೀಡಬೇಕು ಅದಕ್ಕೆ ₹50 ಲಕ್ಷ ನೀಡುತ್ತೇನೆ ಎಂದು ಮುನಿರತ್ನ, ಪವರ್ ಟಿವಿ ನಿರ್ದೇಶಕ ಹಾಗೂ ವರದಿಗಾರನಿಗೆ ಸೂಚಿಸಿದ್ದರು. ಈ ಕುರಿತಾದ ಮಾತುಕತೆಯ ಸಂಭಾಷಣೆಯನ್ನು ಸಂಗ್ರಹಿಸಿ ಸಾಕ್ಷಿ ನೀಡಲಾಗಿದೆ’ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಆದರೆ, ‘ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಬದಲಿಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ದೂರಿಗೆ ಸಂಬಂಧಿಸಿದ ಸಾಕ್ಷಿಗಳ ಹೇಳಿಕೆ ನಂಬಲು ಅರ್ಹವಿಲ್ಲ ಎಂದು ಹೇಳಿರುವುದು ಅವರ ವ್ಯಾಪ್ತಿ ಮೀರಿದ ದೋಷಪೂರಿತ ಅಭಿಪ್ರಾಯ. ಹಾಗಾಗಿ, ಬಿ ರಿಪೋರ್ಟ್ ತಿರಸ್ಕರಿಸಬೇಕು’ ಎಂದು ಮನವಿ ಮಾಡಿದ್ದರು.
ಈ ವಾದಾಂಶ ಮನ್ನಿಸಿರುವ ನ್ಯಾಯಾಧೀಶರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರೆದ ತನಿಖೆ ಕೈಗೊಳ್ಳಬೇಕು’ ಎಂದು ಎಸ್ಐಟಿಗೆ ನಿರ್ದೇಶಿಸಿದ್ದು, ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದ್ದಾರೆ.
ಪ್ರಕರಣವೇನು?: ಶಾಸಕ ಮುನಿರತ್ನ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆಸಲು ಸಂಚು ರೂಪಿಸಿರುವುದನ್ನು ಅರಿತು ಲಗ್ಗೆರೆ ನಾರಾಯಣಸ್ವಾಮಿ ನಂದಿನಿ ಲೇ ಔಟ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.
‘ನನ್ನ ಮತ್ತು ನನ್ನ ಪತ್ನಿಯಾದ ಮಂಜುಳಾ ಎನ್.ಸ್ವಾಮಿ (ಬಿಬಿಎಂಪಿ ಮಾಜಿ ಸದಸ್ಯೆ) ರಾಜಕೀಯ ಏಳ್ಗೆಯ ತೇಜೋವಧೆಗೆ ಮುನಿರತ್ನ ಹನಿಟ್ರ್ಯಾಪ್ ಸಂಚು ರೂಪಿಸಿದ್ದಾರೆ. ಅಂತೆಯೇ, ನನ್ನ ಪತ್ನಿಯ ಕೊಲೆಗೆ ಷಡ್ಯಂತ್ರವನ್ನೂ ಮಾಡಿದ್ದು, ಈ ಕುಕೃತ್ಯಗಳನ್ನು ಕಾರ್ಯಗತಗೊಳಿಸಲು ಸುಪಾರಿ ನೀಡಿದ್ದಾರೆ’ ಎಂದು ಆರೋಪಿಸಿದ್ದರು.
ದೂರಿನ ಆಧಾರದಡಿ ನಂದಿನಿ ಲೇ ಔಟ್ ಠಾಣೆಯ ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ ಕಲಂ 354ಸಿ (ಯಾವುದೇ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು), 109 (ಅಪರಾಧಕ್ಕೆ ಕುಮ್ಮಕ್ಕು), 110 (ಅಪರಾಧಿಕ ಪ್ರಚೋದನೆ), 354 (ಮಹಿಳೆಯ ನಮ್ರತೆ ಅಥವಾ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 115 (ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹವಾದ ಗಂಭೀರ ಅಪರಾಧಗಳಿಗೆ ಪ್ರೇರೇಪಣೆ ನೀಡುವುದು), 116 (ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಕ್ಕೆ ಕುಮ್ಮಕ್ಕು) ಮತ್ತು 118ರ (ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹವಾದ ಗಂಭೀರ ಅಪರಾಧಗಳ ಯೋಜನೆಯನ್ನು ತಿಳಿದೂ ಮರೆಮಾಚುವುದು ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ನಾರಾಯಣಸ್ವಾಮಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.