ADVERTISEMENT

ಕೋವಿಡ್: ಪರೀಕ್ಷೆ ಸಂಖ್ಯೆ ಮತ್ತೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 17:39 IST
Last Updated 19 ಜನವರಿ 2021, 17:39 IST

ಬೆಂಗಳೂರು: ಈ ತಿಂಗಳು ದಿನವೊಂದಕ್ಕೆ 1.30 ಲಕ್ಷ ದಾಟಿದ್ದ ಕೋವಿಡ್‌ ಪರೀಕ್ಷೆಗಳ ಸಂಖ್ಯೆಒಂದು ವಾರದಿಂದ ಇಳಿಕೆ ಕಂಡಿದ್ದು, ಮಂಗಳವಾರ 80,925 ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಈ ತಿಂಗಳು 19 ದಿನಗಳಲ್ಲಿ 19.37 ಲಕ್ಷ ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 18.07 ಲಕ್ಷ ಪರೀಕ್ಷೆಯನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕ ನಡೆಸಲಾಗಿದೆ. ಈವರೆಗೆ ರಾಜ್ಯದಲ್ಲಿ 1.61 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 645 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.33 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ ಆರು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,181ಕ್ಕೆ ತಲುಪಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 807 ಮಂದಿ ಗುಣಮುಖರಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 9.13 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 7,865 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 172 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 53 ಸಾವಿರ ನೇರ ಹಾಗೂ 60 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ADVERTISEMENT

ಕಳೆದ ಡಿ.9 ರ ಬಳಿಕ 5,894 ಮಂದಿ ಬ್ರಿಟನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಅವರಲ್ಲಿ 50 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅವರ ಸಂಪರ್ಕ ಹೊಂದಿದ್ದವರಲ್ಲಿ 26 ಮಂದಿ ಸೋಂಕಿತರಾಗಿದ್ದಾರೆ. ಈವರೆಗೆ 14 ಮಂದಿಯಲ್ಲಿ ರೂಪಾಂತರ ವೈರಾಣು ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ 357 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.95 ಲಕ್ಷಕ್ಕೆ ತಲುಪಿದೆ. ಮೈಸೂರಿನಲ್ಲಿ ಮತ್ತೆ 34 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 53,073ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾ‍ಪುರದಲ್ಲಿ 36, ದಕ್ಷಿಣ ಕನ್ನಡದಲ್ಲಿ 25, ಬೆಳಗಾವಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 18 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 4, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.