ADVERTISEMENT

ಕೋವಿಡ್: ಸೋಂಕಿತರಿಗಿಂತ ಗುಣಮುಖರೆ ಅಧಿಕ, 185 ಓಮೈಕ್ರಾನ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 20:15 IST
Last Updated 27 ಜನವರಿ 2022, 20:15 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ. ಕೊರೊನಾಸೋಂಕಿತರಲ್ಲಿ 67,236 ಮಂದಿ ಗುರುವಾರ ಗುಣಮುಖರಾಗಿದ್ದಾರೆ.

ಕೋವಿಡ್ ಕಾಣಿಸಿಕೊಂಡಾಗಿನಿಂದ ಈವರೆಗೆ 24 ಗಂಟೆಗಳ ಅವಧಿಯಲ್ಲಿ ಚೇತರಿಕೆ ಹೊಂದಿದವರ ಗರಿಷ್ಠ ಸಂಖ್ಯೆ ಇವಾಗಿವೆ.50 ಸಾವಿರದ ಗಡಿದಾಟಿದ್ದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ, ಗುರುವಾರ 38,083ಕ್ಕೆ ಇಳಿಕೆಯಾಗಿದೆ.

ಒಂದು ದಿನದ ಅವಧಿಯಲ್ಲಿ 1.86 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇ 20.44 ರಷ್ಟಿದೆ.ಆರು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ನಾಲ್ಕು ಅಂಕಿ, 23 ಜಿಲ್ಲೆಗಳಲ್ಲಿ ಮೂರು ಅಂಕಿಯಲ್ಲಿದೆ.

ADVERTISEMENT

ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, 17,717 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಮೈಸೂರಿನಲ್ಲಿ 2,587, ಮಂಡ್ಯದಲ್ಲಿ 1,802, ತುಮಕೂರಿನಲ್ಲಿ 1,584, ಹಾಸನದಲ್ಲಿ 1,452, ಧಾರವಾಡದಲ್ಲಿ 1,155 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1,091 ಮಂದಿಹೊಸದಾಗಿ ಸೋಂಕಿತರಾಗಿದ್ದಾರೆ.ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ಇವೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 36.92 ಲಕ್ಷಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 3.28 ಲಕ್ಷಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿಯೇ 1.89 ಲಕ್ಷ ಸೋಂಕಿತರು ಇದ್ದಾರೆ. ಕೋವಿಡ್‌ನಿಂದ ಗುರುವಾರ ಚೇತರಿಸಿಕೊಂಡವರಲ್ಲಿ 43,997 ಮಂದಿ ಬೆಂಗಳೂರಿನವರೆ ಆಗಿದ್ದಾರೆ. ರಾಜ್ಯದಲ್ಲಿಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 33.25 ಲಕ್ಷಕ್ಕೆ ತಲುಪಿದೆ.

ಕೋವಿಡ್ ಪೀಡಿತರಲ್ಲಿ 49 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.ಬೆಂಗಳೂರಿನಲ್ಲಿ 12 ಮಂದಿ, ಬಳ್ಳಾರಿ ಹಾಗೂ ಮೈಸೂರಿನಲ್ಲಿ ತಲಾ ಐವರು, ಹಾಸನ, ದಕ್ಷಿಣ ಕನ್ನಡದಲ್ಲಿ ತಲಾ ನಾಲ್ವರು, ಉತ್ತರ ಕನ್ನಡ, ಉಡುಪಿ, ತುಮಕೂರು, ರಾಯಚೂರು ಹಾಗೂ ಮಂಡ್ಯದಲ್ಲಿ ತಲಾ ಇಬ್ಬರುಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.12 ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,754ಕ್ಕೆ ಏರಿಕೆಯಾಗಿದೆ.

ಓಮೈಕ್ರಾನ್:185 ಪ್ರಕರಣ

ರಾಜ್ಯದಲ್ಲಿ ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್ ಪ್ರಕರಣಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಹೊಸ ತಳಿಯ ಸೋಂಕು 185 ಮಂದಿಯಲ್ಲಿ ಹೊಸದಾಗಿ ದೃಢಪಟ್ಟಿದೆ. ಸೋಂಕಿತರೆಲ್ಲರೂ ಬೆಂಗಳೂರಿನವರೇ ಆಗಿದ್ದಾರೆ.ಈ ಮಾದರಿಯ ಪ್ರಕರಣಗಳ ಒಟ್ಟು ಸಂಖ್ಯೆ 1,115ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಡೆಲ್ಟಾ ಹಾಗೂ ಅದರ ಉಪತಳಿಯ 4,431 ಪ್ರಕರಣಗಳು ವರದಿಯಾಗಿವೆ.

94 ವಿದ್ಯಾರ್ಥಿಗಳಿಗೆ ಕೋವಿಡ್‌

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೊತಪೇಟ ಗ್ರಾಮದ ನವೋದಯ ವಿದ್ಯಾಲಯದ 68 ವಿದ್ಯಾರ್ಥಿಗಳು, 7 ಸಿಬ್ಬಂದಿಗೆ ಗುರುವಾರ ಕೋವಿಡ್ ದೃಢಪಟ್ಟಿದೆ‌. ಹುಣಸಗಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7 ವಿದ್ಯಾರ್ಥಿಗಳು, ಸುರಪುರ ತಾಲ್ಲೂಕಿನ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದ 6 ವಿದ್ಯಾರ್ಥಿನಿಯರು ಹಾಗೂ ವಾರ್ಡನ್‌ಗೆ ಸೋಂಕು ತಗುಲಿದೆ. ರಾಯಚೂರು ಜಿಲ್ಲೆ ಮುದಗಲ್‌ನ ಸಜ್ಜಲಶ್ರೀ ಪ್ರೌಢಶಾಲೆಯ 13 ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.