ADVERTISEMENT

Covid-19 Karnataka Update | ಲಕ್ಷದತ್ತ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2020, 20:33 IST
Last Updated 10 ಆಗಸ್ಟ್ 2020, 20:33 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಜ್ಯದಲ್ಲಿ ಹತ್ತು ದಿನಗಳಲ್ಲಿ ಅಂದಾಜು 50 ಸಾವಿರ ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಕೊರೊನಾದಿಂದ ಮುಕ್ತರಾದವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ (99,126) ಸಾಗುತ್ತಿದೆ.

ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಸೋಮವಾರ 5,218 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆಗಸ್ಟ್‌ 10ರಂದು ಒಂದೇ ದಿನ 4,267 ಮಂದಿಗೆ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಪ್ರಕರಣ 1,82,354ಕ್ಕೆ ತಲುಪಿದೆ. 114 ಮಂದಿ ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3,312ಕ್ಕೆ ಏರಿದೆ.

ಸದ್ಯ 79,908 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 681 ಮಂದಿಯ ಆರೋಗ್ಯ ಗಂಭೀರವಾಗಿದ್ದು, ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಸೋಂಕು ಪ್ರಕರಣ ಇಳಿಮುಖ:ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕು ಪ್ರಕರಣ ಇಳಿಮುಖ ಹಾದಿಯಲ್ಲಿ ಸಾಗಿದೆ. ಶನಿವಾರ (ಆ.8) ಮೊದಲ ಬಾರಿ ಏಳು ಸಾವಿರ ಗಡಿದಾಟಿತ್ತು. ಭಾನುವಾರ ಮತ್ತೆ 5,985ಕ್ಕೆ ಇಳಿಕೆಯಾಗಿದ್ದು, ಸೋಮವಾರ 4,267ಕ್ಕೆ ಕುಸಿದಿದೆ. ಪ್ರಸ್ತುತ ತಿಂಗಳಲ್ಲಿ ವರದಿಯಾದ ಕನಿಷ್ಠ ಸೋಂಕು ಪ್ರಕರಣಗಳು ಇವು.

ಬೆಂಗಳೂರಿನಲ್ಲಿ 1,243 ಮಂದಿಯಲ್ಲಿ ಸೋಂಕಿರುವುದು ಸೋಮವಾರ ದೃಢಪಟ್ಟಿದೆ. 2 ಸಾವಿರ– 3 ಸಾವಿರ ಆಸುಪಾಸಿನಲ್ಲಿರುತ್ತಿದ್ದ ಸಂಖ್ಯೆ ಇಳಿಮುಖದತ್ತ ಸಾಗಿದೆ. ಮತ್ತೊಂದೆಡೆ 2,037 ಮಂದಿ ಚೇತರಿಸಿಕೊಂಡು ಮನೆ ಸೇರಿದ್ದಾರೆ.

ಮೈಸೂರು 374, ಬಳ್ಳಾರಿ 253, ದಾವಣಗೆರೆ 225 ಮಂದಿಗೆ ಸೋಂಕು ತಗುಲಿದೆ.ಬೆಂಗಳೂರಿನಲ್ಲಿ 36, ದಾವಣಗೆರೆ 11, ದಕ್ಷಿಣ ಕನ್ನಡ 8 ಸೇರಿ 114 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.