ADVERTISEMENT

ಪ್ರತಿಪಕ್ಷ, ಸಾರ್ವಜನಿಕರ ವಿರೋಧಕ್ಕೆ ಮಣೆ: ರಾತ್ರಿ ಕರ್ಫ್ಯೂ ವಾಪಸ್

ಒಂದೇ ದಿನದಲ್ಲಿ ನಿರ್ಧಾರ ಬದಲು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:08 IST
Last Updated 24 ಡಿಸೆಂಬರ್ 2020, 20:08 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ರಾಜ್ಯದಾದ್ಯಂತ ಗುರುವಾರದಿಂದ (ಡಿ. 24) ಜ. 1 ರವರೆಗೆ ರಾತ್ರಿ ಕರ್ಫ್ಯೂ ಘೋಷಿಸಿದ್ದ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ರಾಜ್ಯ ಸರ್ಕಾರ ತನ್ನ ಆದೇಶವನ್ನು ಒಂದೇ ದಿನದಲ್ಲಿ ವಾಪಸ್ ಪಡೆದಿದೆ.

ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ ಬಳಿಕ ಇದೇ 22ರಂದು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕರ್ಫ್ಯೂ ಘೋಷಣೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಡಿ.23ರಂದು ತನ್ನ ನಿರ್ಧಾರ ಬದಲಾಯಿಸಿದ್ದ ಮುಖ್ಯಮಂತ್ರಿ ಕರ್ಫ್ಯೂ ವಿಧಿಸುವ ತೀರ್ಮಾನ ಪ್ರಕಟಿಸಿದ್ದರು.

ಬ್ರಿಟನ್ ಹಾಗೂ ಕೆಲವು ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಹೊಸ ಸ್ವರೂಪದ ಕೊರೊನಾ ವೈರಸ್‌ ಅತ್ಯಂತ ವೇಗದಲ್ಲಿ ಹರಡುತ್ತಿದೆ. ರಾಜ್ಯದಲ್ಲಿ ಈ ವೈರಸ್‌ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರುತ್ತದೆ ಎಂದಿದ್ದರು. ಬುಧವಾರ ಸಂಜೆಯ ಹೊತ್ತಿಗೆ, ಮಾರ್ಗಸೂಚಿ ಆದೇಶವನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೊರಡಿಸಿದ್ದರು.

ADVERTISEMENT

ಸರ್ಕಾರದ ಈ ತೀರ್ಮಾನಕ್ಕೆ ಶಾಸಕ ಬಸನಗೌಡಪಾಟೀಲ ಯತ್ನಾಳ, ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್ ಸೇರಿದಂತೆ ಬಿಜೆಪಿ ವಲಯದೊಳಗೆ ಅಪಸ್ವರ ವ್ಯಕ್ತವಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕೂಡಾ ವಿರೋಧಿಸಿದ್ದರು.

ಸಾರ್ವಜನಿಕರು, ಆರೋಗ್ಯ ಕ್ಷೇತ್ರದ ತಜ್ಞರು, ಉದ್ಯಮಿಗಳು ರಾತ್ರಿ ಕರ್ಫ್ಯೂ ಅಗತ್ಯ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆರ್ಥಿಕತೆ, ಉದ್ಯಮ ಚೇತರಿಸಿಕೊಂಡು ದೈನಂದಿನ ಜೀವನ ಸಹಜಸ್ಥಿತಿಗೆ ಮರಳುತ್ತಿರುವ ಹೊತ್ತಿನಲ್ಲೇ ಮತ್ತೆ ಕರ್ಫ್ಯೂ ಹೇರುವ ಸರ್ಕಾರದ ನಿರ್ಧಾರ ತೀವ್ರ ಟೀಕೆಗೂ ಗುರಿಯಾಗಿತ್ತು. ಆ ಬೆನ್ನಲ್ಲೆ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಕರ್ಫ್ಯೂ ವಾಪಸ್ ಪಡೆದಿರುವ ಬಗ್ಗೆ ಪ್ರಕಟಣೆ ನೀಡಿರುವ ಯಡಿಯೂರಪ್ಪ, ‘ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

ಹಗಲು ಸೋಂಕು ಹರುವುದಿಲ್ಲವೇ?: ‘ಹಗಲು ವೇಳೆ ಕೊರೊನಾ ಸೋಂಕು ಹರಡುವುದಿಲ್ಲವೇ. ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಪ್ಯೂ ಜಾರಿ ಯಾವ ರೀತಿಯ ಕ್ರಮ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದರು.

‘ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ರಾತ್ರಿ ಹೊತ್ತು ಕರ್ಫ್ಯೂ ಹೇರುವುದರಿಂದ ಸೋಂಕು ನಿಯಂತ್ರಣ ಸಾಧ್ಯವೇ. ಈ ಬಗ್ಗೆ ಯಾರ ಬಳಿ ಚರ್ಚೆ ಮಾಡಿದ್ದಾರೆ. ರಾತ್ರಿ ವೇಳೆ ಸೋಂಕು ಹರಡುತ್ತದೆ ಎನ್ನುವುದಕ್ಕೆ ಪುರಾವೆ, ದಾಖಲೆಗಳಿವೆಯೇ’ ಎಂದೂ ಪ್ರಶ್ನಿಸಿದ್ದರು.

‘ಹಗಲಲ್ಲಿ ಸಾವಿರಾರು ಜನ ಸೇರುತ್ತಾರೆ. ಆಗ ಕೊರೊನಾ ಸೋಂಕು ತಗುಲುವುದಿಲ್ಲವೇ. ಯಾವುದೊ ಕೆಲವು ವರ್ಗಗಳಿಗೆ ತೊಂದರೆ ಕೊಡಲು ತೀರ್ಮಾನ ಕೈಗೊಳ್ಳಬಾರದು’ ಎಂದು ಹೇಳಿದ್ದರು.

ಯತ್ನಾಳ ಟೀಕೆ, ವಿಶ್ವನಾಥ್‌ ವ್ಯಂಗ್ಯ:‘ರಾತ್ರಿ ಕರ್ಫ್ಯೂಗೆ ಅರ್ಥವೇ ಇಲ್ಲ. ರಾತ್ರಿ ಕರ್ಫ್ಯೂ ವಿಧಿಸುವುದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಜಗಳಕ್ಕೆ ಕಾರಣವಾಗಲಿದೆ. ಇಂಥ ಕಿರಿಕಿರಿಗಳಿಗೆ ಅವಕಾಶ ನೀಡುವ ಅರ್ಧಂಬರ್ಧ ನಿರ್ಣಯ ಮಾಡದೇ ರಾತ್ರಿ ಕರ್ಫ್ಯೂ ತೆಗೆದು ಹಾಕಬೇಕು’ ಎಂದು ಬಸನಗೌಡ ಪಾಟೀಲ ಯತ್ನಾಳ ವಿರೋಧ ವ್ಯಕ್ತಪಡಿಸಿದ್ದರು

ವಿಜಯಪುರದಲ್ಲಿ ಬುಧವಾರ ಮಾತನಾಡಿದ ಅವರು, ‘ರಾತ್ರಿ 11ರಿಂದ ಬೆಳಿಗ್ಗೆ 6ರವರೆಗೆ ಬಹುತೇಕರು ಮನೆಯಲ್ಲೆ ಇರುತ್ತಾರೆ. ರಾತ್ರಿ ಕರ್ಫ್ಯೂನಿಂದ ಯಾವುದೇ ಉಪಯೋಗವಿಲ್ಲ. ಹೀಗಾಗಿ, ಈ ಬಗ್ಗೆ ಮರುಪರಿಶೀಲಿಸಬೇಕು. ಕೊರೊನಾ ರಾತ್ರಿ ಹೆಚ್ಚಾಗುತ್ತೋ, ಹಗಲು ಹೆಚ್ಚಾಗುತ್ತೋ ನಮಗೂ ಗೊತ್ತಿಲ್ಲ. ವೈದ್ಯರ ಸಲಹೆ ಪಡೆದು ನಿರ್ಧರಿಸಬೇಕು’ ಎಂದಿದ್ದರು.

ಜನರಿಗೆ ಜೋಕ್‌: ಮೈಸೂರಿನಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ‘ಸಾಮಾನ್ಯವಾಗಿ ಹೊಸ ವರ್ಷಾಚರಣೆಗೆ ಜನ ಸೇರುತ್ತಾರೆ. ಹೀಗಾಗಿ, ಡಿ. 30 ಮತ್ತು 31ರಂದು ರಾತ್ರಿ ಕರ್ಫ್ಯೂ ಜಾರಿ ಮಾಡಿದರೆ ಸಾಕು. ಆದರೆ ಈಗಲೇ ಏಕೆ’ ಎಂದು ಪ್ರಶ್ನಿಸಿದ್ದರು. ‘ನಾನು ಸರ್ಕಾರದ ಪರವಾಗಿ ಮಾತನಾಡಿ ರಾತ್ರಿ ಕರ್ಫ್ಯೂ ನಿರ್ಧಾರ ಸರಿ ಇದೆ ಎನ್ನಬಹುದು. ಆದರೆ, ಜನರು ಅದನ್ನು ಜೋಕ್ ಆಗಿ ತೆಗೆದುಕೊಂಡಿದ್ದಾರೆ. ಸರ್ಕಾರದ ನಿರ್ಧಾರದಲ್ಲಿ ಯಾವುದೇ ಹುರುಳಿಲ್ಲ’ ಎಂದೂ ಟೀಕಿಸಿದ್ದರು.

**

ರಾತ್ರಿ ಕರ್ಫ್ಯೂ ಅಗತ್ಯ ಇಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಕರ್ಫ್ಯೂ ಹಿಂಪಡೆಯಲಾಗಿದೆ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.