ADVERTISEMENT

ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕೆ 50 ದಿನಗಳ ಗುರಿ: ನಿತ್ಯ 3 ಲಕ್ಷ ಜನರಿಗೆ ಲಸಿಕೆ

1,000 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 22:30 IST
Last Updated 18 ಮಾರ್ಚ್ 2021, 22:30 IST
ಕೋವಿಡ್‌ ಲಸಿಕೆ ನೀಡಿಕೆ–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ ನೀಡಿಕೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲೂ ಕೋವಿಡ್‌ ಎರಡನೇ ಅಲೆ ಬಿರುಸುಗೊಳ್ಳುತ್ತಿರುವ ಬೆನ್ನಲ್ಲೇ ಅದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಪರೀಕ್ಷೆ ಮತ್ತು ಪ್ರತಿ ದಿನ 3 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ.

ಅಲ್ಲದೆ, ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ವೈದ್ಯಕೀಯ ವ್ಯವಸ್ಥೆ ಇಲ್ಲದ ಗ್ರಾಮೀಣ ಪ್ರದೇಶದ ಹಿರಿಯ ನಾಗರಿಕರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿದೆ. 50 ದಿನಗಳಲ್ಲಿ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತರುವ ಗುರಿ ನಿಗದಿ ಮಾಡಿರುವ ಸರ್ಕಾರ, ತುರ್ತುಸ್ಥಿತಿ ನಿಭಾಯಿಸಲು ಬೆಂಗಳೂರಿನಲ್ಲಿ 1,000 ಹಾಸಿಗೆಗಳ ‘ಕೋವಿಡ್‌ ಕೇರ್‌ ಸೆಂಟರ್‌’ ಸ್ಥಾಪಿಸಿದೆ.

ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನೂ ನಡೆಸಿ, ಹಲವು ಕ್ರಮಗಳನ್ನು ಪ್ರಕಟಿಸಿದರು.

ADVERTISEMENT

ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ವೈದ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು 50 ದಿನಗಳ ಕಾಲ ಶ್ರಮಿಸಲಿದ್ದಾರೆ. ಈ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಅತಿ ಮುಖ್ಯ. ಇನ್ನು ಮುಂದೆ ಪ್ರತಿ ದಿನ ಮೂರು ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯನ್ನು ನಿಗದಿಪಡಿಸಲಾಗಿದೆ. ಈಗ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟ ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿರುವವರು ಲಸಿಕೆ ಹಾಕಿಸಿಕೊಳ್ಳಬೇಕು. ಈ ಮೂಲಕ ಎರಡನೇ ಅಲೆಯನ್ನು ಹಿಮ್ಮೆಟ್ಟಿಸಲಾಗುವುದು ಎಂದು ಸುಧಾಕರ್‌ ಹೇಳಿದರು.

ಆಂಬ್ಯುಲೆನ್ಸ್‌ಗಳ ಕೊರತೆ ಆಗಬಾರದು ಎಂಬ ಕಾರಣಕ್ಕೆ ಬೆಂಗಳೂರು ನಗರದಲ್ಲಿ 200 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲ ಮಾಹಿತಿ ತಕ್ಷಣವೇ ಪಡೆಯಲು ರಿಯಲ್ ಟೈಮ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಗೃಹ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಯ ನೇಮಕವನ್ನು ತಾತ್ಕಾಲಿಕವಾಗಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಒಂದು ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ನೆರವು ಬೇಕಾಗುತ್ತದೆ. ಈ ಸಂಬಂಧ ಇದೇ ವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು ಎಂದೂ ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.