ADVERTISEMENT

Covid-19 Karnataka Update: ಬೆಂಗಳೂರಲ್ಲಿ ಇಂದು 15,244 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 21:07 IST
Last Updated 22 ಏಪ್ರಿಲ್ 2021, 21:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ. ಗುರುವಾರ ಒಟ್ಟು 25,795 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 123 ಮಂದಿ ಮೃತರಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಕಾಣಿಸಿಕೊಂಡ ನಂತರ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣ ಇದಾಗಿದೆ. ರಾಜ್ಯದ ವಿವಿಧೆಡೆ ಕೋವಿಡ್‌ ತೀವ್ರಗತಿಯಲ್ಲಿ ಏರುತ್ತಿದೆ. ಹೀಗಾಗಿ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಗುರುವಾರ ಒಟ್ಟು 1.62 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ 15.87ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಶೇ 0.47ಕ್ಕೆ ತಲುಪಿದೆ.

ಗದಗ (73) ಹಾಗೂ ಹಾವೇರಿ (46) ಬಿಟ್ಟು ಇತರ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಮೂರಂಕಿ ಮುಟ್ಟಿದೆ. ತುಮಕೂರಿನಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಗುರುವಾರ ಒಟ್ಟು 1,231 ಮಂದಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಬೆಂಗಳೂರಿನಲ್ಲಿ 15,244 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ADVERTISEMENT

ಬಳ್ಳಾರಿ (940), ಮೈಸೂರು (818), ಹಾಸನ (689), ಕಲಬುರ್ಗಿ (659), ಕೋಲಾರ (587) ಹಾಗೂ ಬೆಂಗಳೂರು ಗ್ರಾಮಾಂತರ (405) ಜಿಲ್ಲೆಗಳಲ್ಲೂ ಅಧಿಕ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 12.47 ಲಕ್ಷದ ಗಡಿ ದಾಟಿದೆ.

ಕೋವಿಡ್‌ ಪೀಡಿತರ ಪೈಕಿ ಬೆಂಗಳೂರಿನಲ್ಲಿ ಒಟ್ಟು 68 ಮಂದಿ ಮೃತರಾಗಿದ್ದಾರೆ. ಕಲಬುರ್ಗಿಯಲ್ಲೂ (11) ಮೃತರ ಸಂಖ್ಯೆ ಏರಿದೆ. ಬಳ್ಳಾರಿ, ಧಾರವಾಡ ಮತ್ತು ತುಮಕೂರಿನಲ್ಲಿ ತಲಾ ಐದು ಮಂದಿ, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯದಲ್ಲಿ ತಲಾ ನಾಲ್ವರು, ಬೀದರ್‌ ಹಾಗೂ ಮೈಸೂರಿನಲ್ಲಿ ತಲಾ ಮೂವರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು ಹಾಗೂ ಉತ್ತರ ಕನ್ನಡದಲ್ಲಿ ತಲಾ ಇಬ್ಬರು, ಬೆಳಗಾವಿ, ಶಿವಮೊಗ್ಗ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಹೀಗಾಗಿ ಇದುವರೆಗೆ ಸತ್ತವರ ಸಂಖ್ಯೆ 13,885ಕ್ಕೆ ಹೆಚ್ಚಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಲಕ್ಷದ (1.96) ಸನಿಹದಲ್ಲಿದ್ದು, ಒಟ್ಟು 985 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್‌ ಪೀಡಿತರ ಪೈಕಿ 5,624 ಜನ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಗುಣಮುಖರ ಸಂಖ್ಯೆ 10.37 ಲಕ್ಷಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.